ನ್ಯೂಸ್ ನಾಟೌಟ್: ಉಡುಪಿಯಲ್ಲಿ ಮುಸ್ಲಿಂ ಕುಟುಂಬಕ್ಕೆ ಸೇರಿದ ತಾಯಿ ಮಕ್ಕಳು ಸೇರಿದಂತೆ ನಾಲ್ವರನ್ನು ಚೂರಿಯಿಂದ ಚುಚ್ಚಿ ಭೀಕರವಾಗಿ ಕೊಲೆಗೈದ ಆರೋಪಿಯನ್ನುಎರಡೇ ದಿನದಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ಹೆಜ್ಜೆಯನ್ನು ನಿರಂತರವಾಗಿ ಎರಡು ದಿನಗಳಿಂದ ಜಾಡು ಹಿಡಿದ ಪೊಲೀಸರು ಕೊನೆಗೂ ಹಂತಕನ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ದೀಪಾವಳಿ ಹಬ್ಬದಂದು ಬೆಳ್ಳಂಬೆಳಗ್ಗೆ ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಹತ್ಯೆಯಾಗಿತ್ತು. ಇಡೀ ರಾಜ್ಯವೇ ಬೆಚ್ಚಿ ಬೀಳಿಸುವಂತಹ ಕುಕೃತ್ಯವನ್ನು ಎಸಗಿದ್ದ ಆರೋಪಿಯನ್ನು ಉಡುಪಿ ಪೊಲೀಸರು ಬೆಳಗಾವಿಯಲ್ಲಿ ಅರೆಸ್ಟ್ ಮಾಡಿದ್ದಾರೆ. ಪ್ರವೀಣ್ ಅರುಣ್ ಚೌಗಲೇ ನಾಲ್ವರನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪಿ, ಕೃತ್ಯ ನಡೆಸಿದ ಬಳಿಕ ಕುಡುಚಿ ಪಟ್ಟಣದ ಸಂಬಂಧಿಯ ಮನೆಯಲ್ಲಿ ಅವಿತಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ. ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಇದೀಗ ಪೊಲೀಸರು ಉಡುಪಿಗೆ ಕರೆತರುತ್ತಿದ್ದಾರೆ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾನೆ ಎಂದು ಶಂಕೆ ವ್ಯಕ್ತವಾಗಿದೆ. ಈತ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಕ್ಯಾಬಿನ್ ಕ್ರೂ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.