ನ್ಯೂಸ್ ನಾಟೌಟ್: ತಮ್ಮ ಮಗ ಕೊನೆಯುಸಿರೆಳೆಯಲು ಕಾರಣವಾದ ಕಾರೊಂದನ್ನು ವ್ಯಕ್ತಿಯೊಬ್ಬರು ಸಿನಿಮೀಯ ರೀತಿಯ ಪತ್ತೇದಾರಿಕೆ ಬಳಿಕ ಪತ್ತೆ ಹಚ್ಚಿದ್ದಾರೆ. ಇದು ಪೊಲೀಸರ ತನಿಖಾ ಪ್ರಕ್ರಿಯೆಯಾ ಬಗ್ಗೆಯೇ ಅನುಮಾನ ಮೂಡಿಸಿದ್ದು ಮಾತ್ರವಲ್ಲದೆ ಪೊಲೀಸರಿಗೇ ಮುಜುಗರವುಂಟು ಮಾಡಿದೆ.
2015ರ ಜುಲೈ ತಿಂಗಳಲ್ಲಿ ತಮ್ಮ ಮಗನಿಗೆ ಡಿಕ್ಕಿ ಹೊಡೆದು ನಾಪತ್ತೆಯಾಗಿದ್ದ ಕಾರಿನ ಹುಡುಕಾಟ ನಡೆಸಿದ ಪಂಜಾಬ್ನ ವಜಿರಾಬಾದ್ ಮೂಲದ ಉದ್ಯಮಿ ಜಿತೇಂದರ್ ಚೌಧರಿ, ತಮಗೆ ಸಿಕ್ಕ ಕಾರಿನ ಸೈಡ್ ಮಿರರ್ ಹಾಗೂ ಹಿಂಭಾಗದ ಲೋಹದ ಭಾಗವೊಂದನ್ನು ಆಧಾರವಾಗಿ ಇರಿಸಿಕೊಂಡು ತನಿಖೆ ನಡೆಸಿದ್ದಾರೆ ಎನ್ನಲಾಗಿದೆ.
ತನಿಖೆ ನಡೆಸುವ ಪೊಲೀಸರು ಮಾಡಬೇಕಾದ ಕೆಲಸಗಳನ್ನು ಚೌಧರಿ ಮಾಡಿದ್ದು, ಅಪಘಾತ ನಡೆದ ರೈಲ್ವೆ ವಿಹಾರದ ಸೆಕ್ಟರ್ 57ರ ಸಮೀಪದ ಎಲ್ಲಾ ಕಾರ್ ವರ್ಕ್ಶಾಪ್ಗಳಿಗೆ ಮತ್ತು ಸರ್ವಿಸ್ ಸೆಂಟರ್ಗಳಿಗೆ ತೆರಳಿ, ಈ ಭಾಗಗಳನ್ನು ತೋರಿಸಿದ್ದಾರೆ ಮತ್ತು ಇವುಗಳ ಬದಲಾವಣೆಗೆ ಯಾವುದಾದರೂ ಕಾರ್ ಬಂದಿತ್ತೇ ಎಂದು ವಿಚಾರಿಸಿದ್ದಾರೆ ಎನ್ನಲಾಗಿದೆ.
ಆದರೆ ಅವರಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಇದು ಮಾರುತಿ ಸುಜುಕಿ ಸ್ವಿಫ್ಟ್ ವಿಡಿಐ ಕಾರಿನ ಬಿಡಿ ಭಾಗ ಎಂದು ಮೆಕ್ಯಾನಿಕ್ ಒಬ್ಬರು ತಿಳಿಸಿದ್ದಾರೆ. ನಂತರ ತನ್ನ ಸಹಾಯಕ್ಕಾಗಿ ಮಾರುತಿ ಕಂಪನಿಯನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ.
“ಕಂಪೆನಿ ಜತೆಗೆ ಹಲವು ತಿಂಗಳು ಪ್ರಯತ್ನ ನಡೆಸಿದ ನಂತರ ನನಗೆ, ಕನ್ನಡಿ ಹಿಂದೆ ಮುದ್ರಿಸಿದ ಬ್ಯಾಚ್ ಸಂಖ್ಯೆಯ ಸಹಾಯದಿಂದ ಕಾರಿನ ನೋಂದಣಿ ಸಂಖ್ಯೆ ಹಾಗೂ ಅದರ ಮಾಲೀಕನನ್ನು ಪತ್ತೆ ಮಾಡುವುದು ಕೊನೆಗೂ ಸಾಧ್ಯವಾಯಿತು ಎನ್ನಲಾಗಿದೆ. ಎಫ್ಐಆರ್ನಲ್ಲಿ ಕಾರಿನ ನೋಂದಣಿ ಸಂಖ್ಯೆ ನಮೂದಿಸಿರಲಿಲ್ಲ. ಕಾರ್ನ ತುಂಡಾದ ಭಾಗಗಳ ಜತೆಗೆ ನೋಂದಣಿ ಸಂಖ್ಯೆಯನ್ನು ತನಿಖಾಧಿಕಾರಿಗೆ ಒಪ್ಪಿಸಿದ್ದೆ” ಎಂದು ಚೌಧರಿ ವಿವರಿಸಿದ್ದಾರೆ.
ಇಷ್ಟೆಲ್ಲಾ ಹೋರಾಟ ನಡೆಸಿದ ಬಳಿಕವೂ ತನಿಖೆ ಮಾತ್ರ ಮುಂದುವರಿಯಲಿಲ್ಲ. ಇದರಿಂದ ಹತಾಶರಾದ ಅವರು 2016ರ ಜನವರಿಯಲ್ಲಿ ಸ್ಥಳೀಯ ನ್ಯಾಯಾಲಯದ ಮೊರೆ ಹೋಗಿದ್ದರು ಎನ್ನಲಾಗಿದೆ. ಸಿಆರ್ಪಿಸಿ ಸೆಕ್ಷನ್ 156 (3) ಅಡಿ ತನಿಖಗ ಕೋರಿ ಅರ್ಜಿ ಸಲ್ಲಿಸಿದರು. ಅಲ್ಲಿ ತನಿಖಾಧಿಕಾರಿ ಆರೋಪಿ ‘ಪತ್ತೆಯಾಗಿಲ್ಲ’ ಎಂಬ ವರದಿ ಸಲ್ಲಿಸಿದರು.
ತಮಗೆ ಅದರ ಯಾವ ಮಾಹಿತಿಯನ್ನೂ ನೀಡಿಲ್ಲ ಎಂದು ಚೌಧರಿ ಆರೋಪಿಸಿದರು. ಆದರೆ ಜುಲೈ 27ರಂದು ಕೋರ್ಟ್ ಆ ವರದಿಯನ್ನು ಒಪ್ಪಿಕೊಂಡಿತ್ತು. 2018ರ ಏಪ್ರಿಲ್ನಲ್ಲಿ ಸಿಆರ್ಪಿಸಿ ಸೆಕ್ಷನ್ 173 (8)ರ ಅಡಿ ಮತ್ತೆ ಕೋರ್ಟ್ ಮೆಟ್ಟಿಲೇರಿದರು. ಆದರೆ ಜೆಎಂಐಸಿ ನ್ಯಾಯಾಧೀಶೆ ಆಕೃತಿ ವರ್ಮಾ ಅರ್ಜಿಯನ್ನು ವಜಾಗೊಳಿಸಿದರು ಎನ್ನಲಾಗಿದೆ.
ಇದನ್ನು ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿಯನ್ನು ಸೆಷನ್ಸ್ ನ್ಯಾಯಾಲಯ ಕೂಡ ವಜಾಗೊಳಿಸಿತು. 2020ರಲ್ಲಿ ಕೋವಿಡ್ ಕಾರಣದಿಂದ ಅವರಿಗೆ ಸಿಗಬೇಕಾದ ನ್ಯಾಯಕ್ಕೆ ಮತ್ತಷ್ಟು ಹಿನ್ನಡೆಯಾಯಿತು. ಅಷ್ಟಾದರೂ ಪ್ರಯತ್ನ ಬಿಡದ ಮಗುವಿನ ತಂದೆ, 2023ರ ಜನವರಿಯಲ್ಲಿ ಪುನಃ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ, ತಮ್ಮ ಮಗ ಅಸುನೀಗಲು ಕಾರಣವಾದ ಕಾರ್ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.
ದೂರುದಾರನಿಗೆ ನೋಟಿಸ್ ನೀಡದೆ ‘ಪತ್ತೆಯಾಗದ’ ವರದಿ ಸ್ವೀಕರಿಸುವುದು ಕಾನೂನುಬಾಹಿರ ಎಂದು ಪರಿಗಣಿಸಿದ ಜೆಎಂಐಸಿ ನ್ಯಾಯಾಧೀಶ ವಿಕ್ರಾಂತ್, ಪೊಲೀಸರ ಮೇಲೆ ದೂರುದಾರರಿಗೆ ಯಾವುದೇ ನಂಬಿಕೆ ಉಳಿದಿಲ್ಲ ಎಂದು ಹೇಳಿದರು. ಚೌಧರಿ ಒದಗಿಸಿದ ಸಾಕ್ಷ್ಯಗಳನ್ನು ಆಧಾರವಾಗಿ ಇಟ್ಟುಕೊಂಡು ಮರು ತನಿಖೆ ನಡೆಸುವಂತೆ ಪೊಲೀಸರಿಗೆ ನ್ಯಾಯಾಲಯ ಸೂಚಿಸಿತ್ತು. ಇಷ್ಟಾದರೂ ಪೊಲೀಸರು ಕ್ರಮ ಕೈಗೊಳ್ಳಲಿಲ್ಲ.
ತನಿಖಾಧಿಕಾರಿ ಉತ್ತರಾಖಂಡಕ್ಕೆ ತೆರಳಿರುವುದರಿಂದ ತನಿಖೆ ನಡೆದಿಲ್ಲ ಎಂದು ಆಗಸ್ಟ್ನಲ್ಲಿ ವರದಿ ಸಲ್ಲಿಸಿದರು. ಇದರಿಂದ ಅಸಮಾಧಾನಗೊಂಡ ನ್ಯಾಯಾಧೀಶರು, ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡು ವಾಗ್ದಂಡನೆ ವಿಧಿಸಿದರು. ಪೊಲೀಸರು ಉದ್ದೇಶಪೂರ್ವಕವಾಗಿಯೇ ಪ್ರಕರಣವನ್ನು ಸರಿಯಾಗಿ ತನಿಖೆ ನಡೆಸಿಲ್ಲ ಮತ್ತು ಸಾಕ್ಷ್ಯಗಳ ನಾಶಕ್ಕೆ ಅವಕಾಶ ನೀಡಿದ್ದಾರೆ ಎಂದು ಕಿಡಿಕಾರಿದರು.
ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆಗೆ ಸೂಚಿಸಿ, ಪ್ರಕರಣದ ಮರು ತನಿಖೆಗೆ ಆದೇಶಿಸಿದರು. ವಾಹನ ಮಾಲೀಕ ಗ್ಯಾನ್ ಚಂದ್ ವಿರುದ್ಧ ಪೊಲೀಸರು ಕೊನೆಗೂ ಕಳೆದ ವಾರ ಆರೋಪಪಟ್ಟಿ ಸಲ್ಲಿಸಿದ್ದಾರೆ. ಇಷ್ಟೆಲ್ಲ ಹೋರಾಟದ ನಂತರ ತಮಗೆ ನ್ಯಾಯ ಸಿಗಬಹುದು ಎಂದು ಚೌಧರಿ ಭರವಸೆ ಹೊಂದಿದ್ದಾರೆ ಎನ್ನಲಾಗಿದೆ. (story cr: vijaya karnataka)