ನ್ಯೂಸ್ ನಾಟೌಟ್: ಜನರ ಗುಂಪೊಂದು ಸಬ್ ಇನ್ಸ್ ಪೆಕ್ಟರ್ ನ್ನು ರಸ್ತೆಯಲ್ಲಿ ಮನಸೋ ಇಚ್ಛೆ ಥಳಿಸಿರುವ ಘಟನೆ ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ಸೋಮವಾರ(ಅ.31 ರಂದು) ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಮಹೋಬಾದ ಪನ್ವಾರಿ ಪ್ರದೇಶದಲ್ಲಿ 13 ವರ್ಷದ ಬಾಲಕ ಬಸ್ಸಿನಡಿ ಸಿಲುಕಿ ಸಾವನ್ನಪ್ಪಿದ್ದ ಕಾರಣಕ್ಕೆ ಈ ಘಟನೆ ನಡೆದಿದೆ ಎನ್ನಲಾಗಿದೆ.. ಇದಕ್ಕೆ ಸಂಬಂಧಿಸಿ ಮೃತನ ಬಾಲಕನ ಸಂಬಂಧಿಗಳು ಹಾಗೂ ಕೆಲ ಸ್ಥಳೀಯರು ರಸ್ತೆಯಲ್ಲಿ ನಿಂತು ಚಾಲಕನ ವಿರುದ್ಧ ಕ್ರಮಕ್ಕೆ ಹಾಗೂ ಪರಿಹಾರಕ್ಕೆ ಒತ್ತಾಯಿಸಿದ್ದಾರೆ. . ಈ ವೇಳೆ ಪ್ರತಿಭಟನೆಯಿಂದ ರಸ್ತೆಯಲ್ಲಿ ಸಂಚಾರ ದಟ್ಟನೆ ಉಂಟಾಗಿತ್ತು. ಇದರಿಂದ ಟ್ರಾಫಿಕ್ ಕ್ಲಿಯರ್ ಮಾಡಲು ಸ್ಥಳಕ್ಕೆ ಸಬ್-ಇನ್ಸ್ಪೆಕ್ಟರ್ ರಾಮ್ ಅವತಾರ್ ಪೊಲೀಸ್ ತುಕಡಿಯೊಂದಿಗೆ ಬಂದಿದ್ದರು ಎನ್ನಲಾಗಿದೆ.
ಈ ವೇಳೆ ಎಸ್ ಐ ಹಾಗೂ ಮೃತ ಬಾಲಕನ ಸಂಬಂಧಿಕರ ನಡುವೆ ಮಾತಿನ ಚಕಮಕಿ ಉಂಟಾಗಿದ್ದು, ಆಕ್ರೋಶಗೊಂಡ ಜನ ಸಬ್-ಇನ್ಸ್ಪೆಕ್ಟರ್ ರಾಮ್ ಅವತಾರ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ರಾಮ್ ಅವತಾರ್ ಅವರಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಒದ್ದು, ಕೋಲುಗಳಿಂದ ಹಲ್ಲೆ ಮಾಡಿದ್ದಾರೆ.
ಉತ್ತರ ಪ್ರದೇಶದ ಸಬ್-ಇನ್ಸ್ಪೆಕ್ಟರ್ (ಎಸ್ಐ) ರಾಮ್ ಅವತಾರ್ ಎಂಬವರಿಗೆ ಜನರು ಹೊಡೆದಿದ್ದು, ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಘಟನಾ ಸ್ಥಳದಲ್ಲಿದ್ದ ಇತರ ಮೂವರು ಪೊಲೀಸರು ಅಲ್ಲಿಂದ ಓಡಿಹೋಗಿದ್ದಾರೆ. ಇದಾದ ಬಳಿಕ ಘಟನಾ ಸ್ಥಳಕ್ಕೆ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ಮತ್ತು ಪ್ರದೇಶದ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಸ್ಥಳಕ್ಕೆ ಆಗಮಿಸಿ ಗುಂಪನ್ನು ಶಾಂತಗೊಳಿಸಿದ್ದಾರೆ. ನಂತರ ರಾಮ್ ಅವತಾರ್ ನನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ವರದಿ ತಿಳಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.