ನ್ಯೂಸ್ ನಾಟೌಟ್: ಮಗನ ಸಾವಿನ ವಿಚಾರವನ್ನು ತಂದೆಗೆ ತಿಳಿಸದೆ ಹೊಸ ಜಾಗನೋಡಲಿಕ್ಕಿದೆ ಬನ್ನಿ ಎಂದು ದೂರದ ಊರಿನಿಂದ ಕರೆದುಕೊಂಡು ಬಂದಿರುವ ಕರುಣಾಜನಕ ಘಟನೆ ಸುಳ್ಯದ ಗುತ್ತಿಗಾರಿನಲ್ಲಿ ನಡೆದಿದೆ.
ಗುತ್ತಿಗಾರಿನಲ್ಲಿ ಸೈಬಿನ್ ಸಿರಿಯಾಕ್ ಎಂಬ ಯುವಕನ ಮೃತದೇಹ ಬೆಂಕಿಯಲ್ಲಿ ಅರೆಬೆಂದ ಸ್ಥಿತಿಯಲ್ಲಿ ಅಡಿಕೆ ರಾಶಿಯ ಮೇಲೆ ಶುಕ್ರವಾರ (ಅ.27) ಪತ್ತೆಯಾಗಿತ್ತು. ಇದೊಂದು ಆತ್ಮಹತ್ಯೆ ಆಗಿರಬಹುದು ಎಂದು ಶಂಕಿಸಲಾಗಿತ್ತು. ಮನೆಯಲ್ಲಿ ಯಾರೂ ಇಲ್ಲದ ವೇಳೆ ದುರ್ಘಟನೆ ಸಂಭವಿಸಿದ್ದು ಸೈಬಿನ್ ಸಿರಿಯಾಕ್ ತಂದೆ ಸಿರಿಯಾಕ್ ಮ್ಯಾಥ್ಯೂ ಕುಂದಾಪುರದಲ್ಲಿ ಇದ್ದರು ಎನ್ನಲಾಗುತ್ತಿದೆ. ಅವರನ್ನು ಊರಿಗೆ ಕರೆದುಕೊಂಡು ಬರಲಾಗಿದೆ.
ಅಲ್ಲಿಂದ ಹೊರಡುವ ತನಕ ಮಗನ ಸಾವಿನ ಸುದ್ದಿ ತಂದೆಗೆ ತಿಳಿದಿರಲಿಲ್ಲ. ಜಾಲ್ಸೂರ್ ನಿಂದ ತಮ್ಮ ಜೋಸೆಫ್ ಮತ್ತು ಪದ್ಮನಾಭ ಅವರು ಸಿರಿಯಾಕ್ ಮ್ಯಾಥ್ಯೂ ಅವರನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ. ಮನೆಗೆ ಬಂದು ತಲುಪಿದಾಗಲೇ ಸಿರಿಯಾಕ್ ಮ್ಯಾಥ್ಯೂ ಅವರಿಗೆ ತಮ್ಮ ಮಗ ಸೈಬಿನ್ ಸಿರಿಯಾಕ್ ಸಾವಿಗೀಡಾಗಿರುವ ವಿಚಾರ ತಿಳಿದು ಬಂದಿದೆ.
ಕಳೆದೆರಡು ತಿಂಗಳಿನಿಂದ ಸಿರಿಯಾಕ್ ಮ್ಯಾಥ್ಯೂ ಮನೆಯಲ್ಲಿ ಇರಲಿಲ್ಲ. ಮೃತ ಸೈಬಿನ್ ಪತ್ನಿ ನಿಮಿಷ ದಸರಾ ರಜೆಯ ಹಿನ್ನೆಲೆಯಲ್ಲಿ ಮಗುವನ್ನು ಕರೆದುಕೊಂಡು ಕೇರಳದಲ್ಲಿರುವ ತಮ್ಮ ತವರು ಮನೆಗೆ ಹೋಗಿದ್ದರು ಎನ್ನಲಾಗಿದೆ. ಈ ವೇಳೆ ಸೈಬಿನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಯಾವ ಕಾರಣಕ್ಕೆ ಸೈಬಿನ್ ಸಾವಿಗೀಡಾಗಿದ್ದಾರೆ ಅನ್ನೋದು ತಿಳಿದು ಬಂದಿಲ್ಲ.