ನ್ಯೂಸ್ ನಾಟೌಟ್ : ಬಿಗ್ ಬಾಸ್ (BBK Season 10) ಸ್ಪರ್ಧಿ ವರ್ತೂರು ಸಂತೋಷ್ (Varthur santhosh Arrest) ಅವರ ಬಂಧನದ ಬೆನ್ನಿಗೇ ಹುಲಿಯ ಉಗುರು (Tiger Nail) ಪ್ರಕರಣ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ.ಹಲವರ ಬಂಧನವಾಗಿದೆ.ಇನ್ನುಳಿದಂತೆ ಈ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಮುಂದುವರಿಯುತ್ತಿದೆ.
ನಕಲಿ ಹುಲಿ ಉಗುರನ್ನು ಕೂಡ ಕಾಕುವಂತಿಲ್ಲ ಎಂಬ ಅರಣ್ಯ ಸಚಿವರ ಹೇಳಿಕೆಗೆ ಈಗ ಎಲ್ಲರೂ ಗಂಭೀರವಾದಂತಿದೆ. ಅದರ ಬಗ್ಗೆ ಇದೀಗ ಸಾರ್ವಜನಿಕ ವಲಯದಲ್ಲಿ ಹುಲಿಯ ಉಗುರು ಹೊಂದಿರುವ ವ್ಯಕ್ತಿಗಳು, ಹುಲಿ ಚರ್ಮದ ಮೇಲೆ ಕುಳಿತ ಧಾರ್ಮಿಕ ವ್ಯಕ್ತಿಗಳ ಚರ್ಚೆ ಹೆಚ್ಚಾಗಿದೆ. ಅದರಲ್ಲಿ ಈಗ ಹೊಸದಾಗಿ ಕೇಳಿಬಂದಿರುವ ಹೆಸರು ಚಿಕ್ಕಮಗಳೂರು ದತ್ತ ಪೀಠದ ಶಾ ಖಾದ್ರಿ (Datta peeta) ಅವರ ಕುಟುಂಬ..!
ಶಾ ಖಾದ್ರಿ ಅವರದು ಬಾಬಾ ಬುಡನ್ ಗಿರಿ ದತ್ತಪೀಠದ (Bababudan giri Datta peeta) ಮುಸ್ಲಿಂ ವಿಭಾಗದ ಕುಟುಂಬವಾಗಿದ್ದು, ಪೂಜಾ ಕಾರ್ಯಗಳಲ್ಲಿ ಭಾಗಿಯಾಗುತ್ತದೆ. ಇವರ ಕುಟುಂಬದ ಬಳಿ ಹುಲಿ ಚರ್ಮ ಇತ್ತು ಎಂಬುದಕ್ಕೆ ಹಲವಾರು ಫೋಟೊಗಳು ಸಾಕ್ಷ್ಯ ಹೇಳುತ್ತಿದ್ದು,ಇದೀಗ ಫೋಟೋಗಳು ವೈರಲ್ಲಾಗಲಾರಂಭಿಸಿವೆ. ಹೀಗಾಗಿ ಈಗಿನ ಗೌಸ್ ಮೊಹಿದ್ದೀನ್ ಶಾ ಖಾದ್ರಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೂಡ ಕೇಳಿಬಂದಿದೆ.
ಚಿಕ್ಕಮಗಳೂರಿನ ಕೊಪ್ಪ ಸಮೀಪದ ಗೌರಿ ಗದ್ದೆಯ ಶ್ರೀ ವಿನಯ್ ಗುರೂಜಿ ಅವರು ಹುಲಿ ಚರ್ಮದ ಮೇಲೆ ಕುಳಿತಿರುವ ಚಿತ್ರ ವೈರಲ್ ಆದ ಹಿನ್ನೆಲೆಯಲ್ಲಿ ಅವರ ವಿಚಾರಣೆ ನಡೆದಿತ್ತು. ಇದೇ ರೀತಿ ಶಾ ಖಾದ್ರಿ ಕುಟುಂಬದವರೂ ಹುಲಿ ಚರ್ಮದ ಮೇಲೆ ಕುಳಿತಿರುವ ಚಿತ್ರಗಳು ಸಾಕ್ಷ್ಯವಾಗಿ ಸಿಕ್ಕಿದ್ದು,ಅವರ ಮೇಲೂ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಹೆಚ್ಚಾಗಿದೆ.
ಶ್ರೀರಾಮಸೇನೆ ಜಿಲ್ಲಾ ಘಟಕ ಅರಣ್ಯ ಅಧಿಕಾರಿಗಳಿಗೆ ದೂರು ನೀಡಲು ಮುಂದಾಗಿದೆ. ಡಿ.ಎಫ್.ಓ.ಗೆ ದೂರು ನೀಡಲಾಗುವುದು ಎಂದು ಶ್ರೀರಾಮಸೇನೆ ಜಾಲತಾಣ ಮತ್ತು ವಿಡಿಯೊ ಮೂಲಕ ತಿಳಿಸಿದೆ.ʻದತ್ತಪೀಠದಲ್ಲಿ ಅನಧಿಕೃತವಾಗಿ ವಾಸವಿರುವ ಶಾ ಖಾದ್ರಿ ಅವರ ಬಳಿಯೂ ಹುಲಿ ಚರ್ಮವಿದೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಶ್ರೀರಾಮಸೇನೆ ಒತ್ತಾಯಿಸಿದೆ.