ನ್ಯೂಸ್ನಾಟೌಟ್: 21 ಪಬ್, ಬಾರ್ ಮತ್ತು ರೆಸ್ಟೋರೆಂಟ್ ಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೀಗ ಜಡಿದಿದೆ. ಬೆಂಗಳೂರಿನಲ್ಲಿ ಸುರಕ್ಷತಾ ನಿಯಮಗಳನ್ನು ಪಾಲಿಸದ ಕಾರಣಕ್ಕೆ ಅಧಿಕಾರಿಗಳು ಎಚ್ಚರಿಕೆ ನೀಡಿದ ಮೇಲೂ ಎಚ್ಚೆತ್ತುಕೊಳ್ಲದ ಕೈಗೊಳ್ಳದ ರೆಸ್ಟೋರೆಂಟ್ ಮತ್ತು ಪಬ್ ಮಾಲಿಕರ ವಿರುದ್ಧ ಕ್ರಮ ಜರುಗಿಸಲಾಗಿದೆ.
ಇತೀಚೆಗೆ ಬೆಂಗಳೂರಿನ ಕೋರಮಂಗಲದ ರೂಫ್ ಟಾಪ್ ಮಡ್ ಕೆಫೆಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎಚ್ಚೆತ್ತಿಕೊಂಡಿರುವ ಬಿಬಿಎಂಪಿ ಇಂತಹ ರೆಸ್ಟೋರೆಂಟ್ ಗಳ ತಪಾಸಣೆಗಾಗಿ ವಿಶೇಷ ಅಭಿಯಾನವನ್ನು ಹಮ್ಮಿಕೊಂಡಿದೆ.
ಆರೋಗ್ಯಾಧಿಕಾರಿಗಳು ಪಾಲಿಕೆ ವ್ಯಾಪ್ತಿಯ ಎಂಟೂ ವಲಯಗಳಲ್ಲಿ ಮೂರು ದಿನಗಳಿಂದ ತಪಾಸಣೆ ನಡೆಸುತ್ತಿದ್ದಾರೆ. ಪೂರ್ವ ವಲಯದಲ್ಲಿ ತಪಾಸಣೆ ನಡೆಸಿದ 69 ರೆಸ್ಟೋರೆಂಟ್ ಗಳ ಪೈಕಿ 63 ಕ್ಕೆ ನೋಟಿಸ್ ನೀಡಲಾಗಿದೆ. ರಾಜರಾಜೇಶ್ವರಿ ವಲಯದಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದ ಎಲ್ಲ 29 ರೆಸ್ಟೋರೆಂಟ್ ಗಳಿಗೆ ನೋಟಿಸ್ ನೀಡಿದ್ದಾರೆ. ನಿಯಮಾವಳಿಗಳನ್ನು ಪಾಲಿಸದೇ ಇರುವ21 ರೆಸ್ಟೋರೆಂಟ್ ಗಳಿಗೆ ಬೀಗ ಹಾಕಲಾಗಿದೆ ಎಂದು ವರದಿ ತಿಳಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 1118 ಪಬ್, ಬಾರ್ ಮತ್ತು ರೆಸ್ಟೋರೆಂಟ್ ಗಳಿಗೆ ಪರವಾನಗಿ ನೀಡಲಾಗಿದೆ. ಇದರಲ್ಲಿ ಪೂರ್ವ ವಲಯದಲ್ಲಿ ಅತಿ ಹೆಚ್ಚು ಅಂದರೆ 284 ಉದ್ದಿಮೆಗಳಿವೆ. ಪಶ್ಚಿಮ(167), ರಾಜರಾಜೇಶ್ವರಿ ನಗರ(75), ದಾಸರಹಳ್ಳಿ(34), ಯಲಹಂಕ(110), ಮಹದೇವಪುರ(161), ಬೊಮ್ಮನಹಳ್ಳಿ ವಲಯದಲ್ಲಿ 101 ಕ್ಕೆ ಪರವಾನಗಿ ನೀಡಲಾಗಿದೆ.
ಒಟ್ಟಾರೆ ಬೆಂಗಳೂರಿನಲ್ಲಿ 280 ರೆಸ್ಟೋರೆಂಟ್ ಗಳ ತಪಾಸಣೆ ನಡೆಸಲಾಗಿದ್ದು, 167 ರೆಸ್ಟೋರೆಂಟ್ ಗಳಿಗೆ ನೋಟಿಸ್ ನೀಡಲಾಗಿದೆ. ಪ್ರಸಿದ್ಧ ಬಾರ್ ರೆಸ್ಟೋರೆಂಟ್ಗಳಾದ ಜಾಮಿಟ್ರಿ ಗ್ಯಾಸ್ಟ್ರೋ ಪಬ್, ಕ್ಯೂಬ್ ಎಕ್ಸ್, ಮ್ಯಾಗ್ನಸ್ ಕೇರ್, ತಲ್ಲಿ ಟೆರಾಸ್ ಲಿಟ್ ಲೌಂಜ್ ಕೆಫೆ ಮತ್ತು ಹಾರ್ಟ್ ಬ್ರೇಕರ್ ಪಬ್ ಗಳಿಗೆ ಯಾವುದೇ ನೋಟಿಸ್ ನೀಡದೆ ಬೀಗ ಹಾಕಲಾಗಿದೆ. ದಾಳಿ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳು ವ್ಯಾಪಾರ ಪರವಾನಗಿ, ಅಡುಗೆ ಮನೆ, ಸ್ವಚ್ಛತೆ, ತುರ್ತು ನಿರ್ಗಮನ, ಬೆಂಕಿ ಸುರಕ್ಷತೆ ಮೊದಲಾದ ಅಂಶಗಳನ್ನು ಕುರಿತು ತಪಾಸಣೆ ಮಾಡುತ್ತಿದ್ದಾರೆ.