ನ್ಯೂಸ್ ನಾಟೌಟ್: ಪ್ರಯಾಣಿಕನೊಬ್ಬ ತನ್ನ ಬ್ಯಾಗ್ನಲ್ಲಿ ಬಾಂಬ್ ಇದೆ ಎಂದು ಬೆದರಿಕೆ ಹಾಕಿದ ಹಿನ್ನೆಲೆ ಪುಣೆಯಿಂದ ದೆಹಲಿಗೆ ತೆರಳುತ್ತಿದ್ದ ವಿಮಾನ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗಿನ ಜಾವ ತುರ್ತು ಭೂಸ್ಪರ್ಶ ಮಾಡಿದ ಘಟನೆ ನಡೆದಿದೆ.
ಆಕಾಶ ಏರ್ಲೈನ್ಸ್ನ ಸಂಖ್ಯೆ ಕ್ಯೂಪಿ 1148 ವಿಮಾನ ಶನಿವಾರ ರಾತ್ರಿ ಪುಣೆಯಿಂದ ದೆಹಲಿಗೆ ಹೊರಟಿತ್ತು. ಈ ವಿಮಾನದಲ್ಲಿ 185 ಪ್ರಯಾಣಿಕರು ಮತ್ತು ಆರು ಮಂದಿ ಸಿಬ್ಬಂದಿ ಪ್ರಯಾಣಿಸುತ್ತಿದ್ದರು.
ಭದ್ರತಾ ಕಾರಣಗಳಿಂದಾಗಿ ವಿಮಾನವನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಲಾಗಿದೆ. ಪೊಲೀಸರು ಬಾಂಬ್ ಬೆದರಿಕೆ ಹಾಕಿದ ಪ್ರಯಾಣಿಕನನ್ನು ಬಂಧಿಸಿದ್ದಾರೆ. ಆತನ ಹೆಸರು ಇನ್ನೂ ಬಹಿರಂಗವಾಗಿಲ್ಲ.
ಘಟನೆಯ ಕುರಿತು ಸಿಐಎಸ್ಎಫ್ ಅಧಿಕಾರಿ ವೀರೇಂದ್ರ ಸಿಂಗ್ ಮುಂಬೈ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದಾರೆ. ನಂತರ ಬಿಡಿಡಿಎಸ್ ತಂಡ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಬ್ಯಾಗ್ನಲ್ಲಿ ಬಾಂಬ್ ಇರುವುದಾಗಿ ತಿಳಿಸಿದ ಪ್ರಯಾಣಿಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಆದರೆ ಆತನ ಬಳಿ ಅನುಮಾನಾಸ್ಪದವಾಗಿ ಏನೂ ಪತ್ತೆಯಾಗಿಲ್ಲ. ಬಾಂಬ್ ಬೆದರಿಕೆ ಹಾಕಿದ ಪ್ರಯಾಣಿಕನಿಗೆ ಎದೆಯಲ್ಲಿ ನೋವು ಕಾಣಿಸಿಕೊಂಡಿತ್ತು, ಹೀಗಾಗಿ ಶೀಘ್ರ ಚಿಕಿತ್ಸೆ ಪಡೆಯಲು ತನ್ನ ಬ್ಯಾಗ್ನಲ್ಲಿ ಬಾಂಬ್ ಇದೆ ಎಂದು ಹೇಳಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆಕಾಶ ಏರ್ ಫ್ಲೈಟ್ QP 1148, ಅಕ್ಟೋಬರ್ 21, 2023 ರಂದು ಬೆಳಗ್ಗೆ ಪುಣೆಯಿಂದ ದೆಹಲಿಗೆ ತೆರಳುತ್ತಿತ್ತು. 185 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ವಿಮಾನ ಟೇಕ್ ಆಫ್ ಆದ ಸ್ವಲ್ಪ ಸಮಯದಲ್ಲೇ ಭದ್ರತಾ ಎಚ್ಚರಿಕೆ ಬಂದಿದೆ. ಇದರಿಂದ ಸುರಕ್ಷತೆ ಮತ್ತು ಭದ್ರತಾ ಕಾರ್ಯವಿಧಾನಗಳ ಪ್ರಕಾರ, ವಿಮಾನವನ್ನು ಮುಂಬೈಗೆ ತಿರುಗಿಸಲಾಗಿದೆ. ಕ್ಯಾಪ್ಟನ್ ಅಗತ್ಯವಿರುವ ಎಲ್ಲ ತುರ್ತು ಕ್ರಮಗಳನ್ನು ಅನುಸರಿಸಿ ಇಂದು ಬೆಳಗಿನ ಜಾವ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಿದ್ದಾರೆ ಎಂದು ವಿಮಾನಯಾನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.