ಕರಾವಳಿ

ಸುಳ್ಯದಲ್ಲಿ ಮಿತಿ ಮೀರಿದ ಕಳ್ಳರ ಹಾವಳಿ..! ಪೊಲೀಸರು ನೀಡಿರುವ ಎಚ್ಚರಿಕೆ ಸಂದೇಶದಲ್ಲೇನಿದೆ..?

ನ್ಯೂಸ್ ನಾಟೌಟ್: ಸುಳ್ಯದಲ್ಲಿ ಕಳ್ಳತನ ಪ್ರಕರಣ ಸೇರಿದಂತೆ ಕಳೆದ ಕೆಲವು ತಿಂಗಳಲ್ಲಿ ಹಲವು ದರೋಡೆ ಪ್ರಕರಣಗಳು ನಡೆದಿದೆ. ಪೊಲೀಸರು ಹಗಲು-ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದರೂ ಕಳ್ಳರ ತಂಡ ಸಕ್ರಿಯವಾಗಿ ಕಾರ್ಯಾಚರಣೆ ನಡೆಸುತ್ತಿದೆ. ಸಹಜವಾಗಿಯೇ ಇದು ಪೊಲೀಸರಿಗೆ ದೊಡ್ಡ ತಲೆನೋವಾಗಿದೆ. ಇದರ ಹಿಂದಿರುವ ಖತರ್ನಾಕ್ ಕಳ್ಳರ ಗ್ಯಾಂಗ್ ನ ಬಂಧಿಸಬೇಕು ಅನ್ನುವ ಕೂಗು ಹೆಚ್ಚುತ್ತಿರುವ ಬೆನ್ನಲ್ಲೇ ಪೊಲೀಸರು ಸಾರ್ವಜನಿಕರಿಗಾಗಿ ಜಾಗೃತಿ ಸಂದೇಶ ಹಂಚಿಕೊಂಡಿದ್ದಾರೆ.

ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲಾ ಗ್ರಾಮದ ನಾಗರೀಕರಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ತಾವುಗಳು ತಮ್ಮ ಮನೆಯಿಂದ ಹೊರ ಪ್ರದೇಶಗಳಿಗೆ/ಪರ ಊರುಗಳಿಗೆ ತೆರಳುವ ಸಮಯ ಮನೆಗೆ ಲಾಕ್ ಹಾಕಿಕೊಂಡು ತಪ್ಪದೇ ಅಕ್ಕ ಪಕ್ಕದ ಮನೆಗಳಿಗೆ ಮಾಹಿತಿ ನೀಡಿ ತಮ್ಮ ಮನೆಯ ಮೇಲೆ ನಿಗಾ ಇಡುವಂತೆ ತಿಳಿಸಿ ಹೊರಡಿ. ಮನೆಯ ಬಾಗಿಲುಗಳಿಗೆ ಬೀಗವನ್ನು ಹಾಕದೇ door locker ಗಳನ್ನು ಅಳವಡಿಸಿಕೊಳ್ಳುವುದು. ತಾವು ಮನೆ ಬಿಟ್ಟು ಹೊರಡುವ ಸಮಯ ತಾವು ಮನೆಯನ್ನು ಬಿಟ್ಟು ಹೊರಡುತ್ತಿರುವ ಬಗ್ಗೆ ತಮ್ಮ ತಮ್ಮ ಗ್ರಾಮದ ಬೀಟ್ ಪೊಲೀಸ್ ಅಥವಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ತೆರಳುವುದು.

ಹೊರಡುವ ಮುಂಚೆ ಪ್ರತಿದಿನ ಮನೆಗೆ ಹಾಕಲಾಗುವ ಪತ್ರಿಕೆ, ಹಾಲು, ಕರೆಂಟ್ ಬಿಲ್,ಕೋರಿಯರ್ ಇತ್ಯಾದಿಗಳನ್ನು ತಾವು ವಾಪಾಸ್ ಬರುವವರೆಗೆ ಹಾಕದಂತೆ ತಿಳಿಸುವುದು. ತಪ್ಪದೇ ಚಿನ್ನ, ಒಡವೆಗಳನ್ನು ಅಗತ್ಯಕ್ಕಿಂತ ಹೆಚ್ಚು ಮನೆಯಲ್ಲಿ ಇಟ್ಟುಕೊಳ್ಳದೆ ಬ್ಯಾಂಕ್ ಲಾಕರ್ ಗಳಲ್ಲಿ ಇಡುವಂತೆ ಕೋರಿಕೆ. ಯಾರಾದರೂ ತಮ್ಮ ಗ್ರಾಮಗಳಲ್ಲಿ ಅಪರಿಚಿತ /ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ಕೂಡಲೇ ಬೀಟ್ ಪೊಲೀಸ್ ರಿಗಾಗಲಿ ಅಥವಾ ತುರ್ತು ಕರೆ 112 ನಂಬರ್ ಗಾಗಲಿ ಕೂಡಲೇ ಕರೆಮಾಡಿ ತಿಳಿಸುವುದು. ರಾತ್ರಿ ವೇಳೆ ಮನೆಯ ಸುತ್ತ ಮುತ್ತ ಸಾಕಷ್ಟು ವಿದ್ಯುತ್ ಬೆಳಕು ಇರುವಂತೆ ನೋಡಿಕೊಳ್ಳುವುದು. ಮನೆಯ ಸುತ್ತ ಮುತ್ತ CCTV ಕ್ಯಾಮರಾ ಗಳನ್ನು ಅಳವಡಿಸಿಕೊಳ್ಳುವುದು. ಇತರೆ ಅಗತ್ಯ ಕ್ರಮಗಳನ್ನು ಕೈಗೊಂಡು ಯಾವುದೇ ರೀತಿಯ ಕಳ್ಳತನ ಆಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸುಳ್ಯ ಪೊಲೀಸ್ ಠಾಣೆ /ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಿ ಸಹಕರಿಸುವಂತೆ ಠಾಣಾ ವ್ಯಾಪ್ತಿಯ ಎಲ್ಲಾ ಗ್ರಾಮದ ನಾಗರೀಕರಲ್ಲಿ ವಿನಂತಿಸಲಾಗಿದೆ ಎಂದು ತಿಳಿಸಲಾಗಿದೆ.

Related posts

ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಕಾಫಿನಾಡ ಜಿಲ್ಲಾಸ್ಪತ್ರೆ,ಮತ್ತೋರ್ವ ಮಹಿಳೆಯ ಅಂಗಾಂಗ ರವಾನೆಗೆ ಸಜ್ಜು

ಬಿಜೆಪಿ ಹಿರಿಯ ನಾಯಕಿ ನಿಧನ

ಕಾಂಗ್ರೆಸ್ ಸರಕಾರದ ‘ಶಕ್ತಿ’ ಯೋಜನೆಗೆ ಖಾವಂದರ ಮೆಚ್ಚುಗೆ:ಸದನದಲ್ಲೂ ಪ್ರತಿಧ್ವನಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪತ್ರ!