ನ್ಯೂಸ್ ನಾಟೌಟ್ : ಮುಂಬೈ-ಪುಣೆ ಎಕ್ಸ್ಪ್ರೆಸ್ವೇನಲ್ಲಿ 215 ಕಿ.ಮೀ. ವೇಗದಲ್ಲಿ ಅಜಾಗರೂಕತೆಯಿಂದ ತಮ್ಮ ಲಂಬೋರ್ಗಿನಿ ಕಾರನ್ನು ಚಲಾಯಿಸಿದ್ದಕ್ಕೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma)ಗೆ ಮುಂಬೈ ಪೊಲೀಸರು ದಂಡ ವಿಧಿಸಿದ್ದಾರೆ.
ರೋಹಿತ್ ಭಾನುವಾರ ತಂಡದ ಸದಸ್ಯರೊಂದಿಗೆ ಪುಣೆಗೆ ಬಂದಿಳಿದರು. ವಿಶ್ರಾಂತಿಯ ದಿನವಾದ ಸೋಮವಾರ ಅವರು ಮುಂಬೈನ ಮನೆಗೆ ತೆರಳಿದ್ದಾರೆ. ಬಳಿಕ ಇಂದು ನಡೆಯಲಿರುವ ಪಂದ್ಯಕ್ಕಾಗಿ ಮಂಗಳವಾರ ವಾಪಾಸ್ ಆಗಿದ್ದರು. ಈ ವೇಳೆ ಅವರು ಕಾರನ್ನು ವೇಗವಾಗಿ ಚಾಲನೆ ಮಾಡಿದ್ದಾರೆ ಎನ್ನಲಾಗಿದೆ.
ವಿಶ್ವಕಪ್ನಲ್ಲಿ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಉಳಿದ ಆಟಗಾರರನ್ನು ಸೇರಿಕೊಳ್ಳಲು ಈ ವೇಗದಲ್ಲಿ ಚಾಲನೆ ಮಾಡಿದ್ದಾರೆ ಎನ್ನಲಾಗಿದೆ. ರೋಹಿತ್ ಕಾರು ಮೊದಲು 200 ಕಿಮೀ ವೇಗದಲ್ಲಿತ್ತು. ಬಳಿಕ ಅದು 215ರ ವೇಗವನ್ನು ತಲುಪಿತ್ತು. ಇದರಿಂದಾಗಿ ಅವರಿಗೆ ಮೂರು ನಿಯಮಗಳನ್ನು ಉಲ್ಲಂಘಿಸಿದ ಚಲನ್ ನೀಡಲಾಗಿದೆ.
ರೋಹಿತ್ ಶರ್ಮಾ ಈ ಬಾರಿಯ ವಿಶ್ವಕಪ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಮೊಹಮ್ಮದ್ ರಿಜ್ವಾನ್ (248 ರನ್) ಮತ್ತು ಡೆವೊನ್ ಕಾನ್ವೇ (229 ರನ್) ಗಳಿಸಿದ್ದರೆ ರೋಹಿತ್ ಶರ್ಮಾ 217 ರನ್ ಗಳಿಸಿದ್ದಾರೆ. ಸಿಕ್ಸರ್ನಲ್ಲಿ ರೋಹಿತ್ ಶರ್ಮಾ ಮತ್ತೊಂದು ದಾಖಲೆ ಬರೆದಿದ್ದಾರೆ.