ನ್ಯೂಸ್ ನಾಟೌಟ್: ಕಾಳಿಂಗ ಸರ್ಪದೊಂದಿಗೆ ಕಾರಿನಲ್ಲಿ ಪ್ರಯಾಣಿಸಿದ ನಾಲ್ವರಿದ್ದ ಕುಟುಂಬವೊಂದು ಪವಾಡ ಸದೃಶವಾಗಿ ಅಪಾಯದಿಂದ ಬಚಾವಾಗಿದೆ.
ಸಂಬಂಧಿಕರ ಮನೆಯಲ್ಲಿ ವಾಹನ ನಿಲ್ಲಿಸಿದ ಬಳಿಕವಷ್ಟೇ ಕಾರಿನಲ್ಲಿ 10 ಅಡಿ ಉದ್ದದ ಕಾಳಿಂಗ ಸರ್ಪವಿರುವುದು ತಿಳಿದುಬಂದಿದೆ.ಈ ಘಟನೆ ಕಾರವಾರವಾದಲ್ಲಿ ನಡೆದಿದೆ.
ರಾಮನಗರದಿಂದ ಕಾರಿನಲ್ಲಿ ಬಂದ ಕುಟುಂಬಸ್ಥರು ಕುಂಬಾರವಾಡದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದಾರೆ. ಆಗ ಮನೆಯಲ್ಲಿದ್ದ ಬೆಕ್ಕು ವಿಚಿತ್ರವಾಗಿ ಆಡುತ್ತಾ, ಕಾರನ್ನು ಪರಿಶೀಲಿಸಲಾರಂಭಿಸಿದೆ.
ಆಗ ಕುಟುಂಬ ಏನಾಗಿರಬಹುದೆಂದು ಕಾರನ್ನು ಪರಿಶೀಲಿಸಲು ಮುಂದಾಗಿದೆ. ಈ ವೇಳೆ ಕಾರಿನಿಂದ ದೊಡ್ಡ ಶಬ್ದವೊಂದು ಕೇಳಿಸಿದೆ. ಆಗ ಕಾರಿನೊಳಗೆ ದೊಡ್ಡ ಕಾಳಿಂಗ ಸರ್ಪವೊಂದು ಇರುವುದು ಕಂಡುಬಂದಿದೆ.
ಇದನ್ನು ಕಂಡು ಆಘಾತಕ್ಕೊಳಗಾದ ಕುಟುಂಬದವರು, ತಕ್ಷಣವೇ ಸ್ಥಳೀಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಅರಣ್ಯ ಸಿಬ್ಬಂದಿ ಹಾವು ರಕ್ಷಕರನ್ನು ಕರೆಸಿದ್ದು, ಸುದೀರ್ಘ ಹೋರಾಟದ ನಂತರ ಹಾವನ್ನು ರಕ್ಷಿಸಿ, ಕಾಡಿಗೆ ಬಿಟ್ಟಿದ್ದಾರೆ ಎಂದು ವರದಿ ತಿಳಿಸಿದೆ.