ನ್ಯೂಸ್ ನಾಟೌಟ್: ವಂಚನೆ ಪ್ರಕರಣದಲ್ಲಿ ತಮಿಳು ನಿರ್ಮಾಪಕ ರವೀಂದರ್ ಜೈಲು ಸೇರುತ್ತಿದ್ದಂತೆ, ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರಂತೆ ಪತ್ನಿ ಮಹಾಲಕ್ಷ್ಮೀ ಶಂಕರ್. ಅಷ್ಟೇ ಅಲ್ಲ ಪತಿ ರವೀಂದರ್ ತನಗೆ ಮೋಸ ಮಾಡಿ ಮದುವೆಯಾಗಿದ್ದಾನೆ ಎಂದೂ ಹೇಳಿಕೊಂಡಿದ್ದಾರೆ.
ಎಲ್ಲೆಡೆ ಭಾರೀ ಚರ್ಚೆಗೆ ಕಾರಣವಾಗಿದ್ದ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಮತ್ತು ಮಹಾಲಕ್ಷ್ಮೀ ಶಂಕರ್ ಜೋಡಿಯ ಮದುವೆ ಈಗ ತಿನಕ್ಕೊಂದು ತಿರುವು ಪಡೆಯುತ್ತಿದೆ. ಇಬ್ಬರಿಗೂ ಇದು ಎರಡನೇ ಮದುವೆಯಾಗಿದ್ದು, ಈ ಜೋಡಿ ಮದುವೆ ಆಗಿದ್ದೇ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿಯೂ ಟ್ರೋಲ್ ಆಗಿದ್ದರು.
ಇವರೇನು ಹೆಚ್ಚು ದಿನ ಒಟ್ಟಿಗೆ ಇರಲ್ಲ, ಹಣದ ಆಸೆಗಾಗಿ ಆತನನ್ನು ಮದುವೆಯಾಗಿದ್ದಾಳೆ. ಗಂಡ ಹೆಂಡತಿಯಾಗಿ ಈ ಜೋಡಿ ಒಟ್ಟಿಗೆ ಸಂಸಾರ ಮಾಡುವುದು ಕೆಲವು ದಿನ ಮಾತ್ರ.. ಹೀಗೆ ಬಗೆ ಬಗೆ ರೀತಿಯಲ್ಲಿ ಇವರಿಬ್ಬರನ್ನು ಟ್ರೋಲ್ ಮಾಡಿದ್ದರು ನೆಟ್ಟಿಗರು. ಇದ್ಯಾವುದಕ್ಕೂ ಕ್ಯಾರೇ ಎನ್ನದ ಈ ಜೋಡಿ ಎಲ್ಲೆಂದರಲ್ಲಿ ಸುತ್ತಾಡುತ್ತಿದ್ದರು.
ಕಳೆದ ವರ್ಷದ ಸೆ. 1ರಂದು ಮದುವೆಯಾಗಿತ್ತು, ಅಲ್ಲಿಂದ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವವರೆಗೂ ಎಲ್ಲವೂ ಚೆನ್ನಾಗಿಯೇ ಇತ್ತು.
ಪತ್ನಿಯನ್ನು ಸದಾ ಹಾಡಿ ಹೊಗಳುತ್ತಿದ್ದ ರವೀಂದರ್, ಪತ್ನಿ ಮೇಲಿನ ತಮ್ಮ ಪ್ರೀತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಪತ್ರಗಳ ಮೂಲಕ ವ್ಯಕ್ತಪಡಿಸುತ್ತಿದ್ದರು. ಹೀಗಿರುವಾಗಲೇ ವಂಚನೆ ಕೇಸ್ನಲ್ಲಿ ರವೀಂದರ್ ಬಂಧನವಾಗುತ್ತಿದ್ದಂತೆ ಮಹಾಲಕ್ಷ್ಮೀ ವರಸೆ ಬದಲಿಸಿದ್ದಾರೆ. ಅದಕ್ಕೆ ಕಾರಣ ರವೀಂದರ್ ಮೇಲಿನ ಕೇಸ್ ಎಂಬುದು ಗೊತ್ತಾಗಿದೆ.
ಘನತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಯೋಜನೆಗೆ ಹಣ ಹೂಡಿದರೆ ದುಪ್ಪಟ್ಟು ಲಾಭ ಸಿಗುತ್ತದೆ ಎಂದು ಚೆನ್ನೈನ ಬಾಲಾಜಿ ಗಾಬಾ ತಮ್ಮ ಮಾಧವ ಮೀಡಿಯಾ ಪ್ರೈ. ಲಿಮಿಟೆಡ್ನ ಬಾಲಾಜಿ ಎಂಬುವವರಿಗೆ ರವೀಂದರ್ ನಂಬಿಸಿದ್ದರು. ಅವರಿಂದ 16 ಕೋಟಿ ಹಣವನ್ನು ಹೂಡಿಕೆ ಸಹ ಮಾಡಿಸಿದ್ದರು. ಈ ಯೋಜನೆಯಲ್ಲಿ ಹೂಡಿಕೆ ಮಾಡುವಂತೆ ಹೇಳಿ ನಕಲಿ ದಾಖಲೆಗಳನ್ನು ಬಳಸಿ ವಂಚನೆಯಲ್ಲಿ ತೊಡಗಿದ್ದರು ಎಂದು ಉದ್ಯಮಿ ಬಾಲಾಜಿ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ರವೀಂದರ್ ಅವರನ್ನು ಚೆನ್ನೈ ಪೊಲೀಸರು ಸೆ. 7ರಂದೇ ಬಂಧಿಸಿದ್ದರು.
ಪತಿ ರವೀಂದರ್ ಜೈಲು ಪಾಲಾಗಿದ್ದರೆ, ಇತ್ತ ಮಹಾಲಕ್ಷ್ಮೀ ಪತಿಗೆ ಜಾಮೀನು ಕೊಡಿಸುವ ಕಾರ್ಯದಲ್ಲಿ ನಿರತರಾಗಿದ್ದರೂ, ಅರ್ಜಿ ತಿರಸ್ಕೃತಗೊಂಡಿದೆ. ಜೈಲು ಸೇರಿದ ಮೇಲಿಂದ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಸಹ ಹಂಚಿಕೊಳ್ಳದ ಮಹಾಲಕ್ಷ್ಮೀ ಕಳೆದ ನಾಲ್ಕೈದು ದಿನಗಳಿಂದ ಎಂದಿನಂತೆ, ನಿತ್ಯ ನಾಲ್ಕೈದು ಪೋಸ್ಟ್ಗಳನ್ನು ಹಂಚಿಕೊಳ್ಳುವುದರ ಜತೆಗೆ ಕಲರ್ಫುಲ್ ಫೋಟೋಶೂಟ್ಗಳಲ್ಲಿ ಮಿಂಚುತ್ತಿದ್ದಾರೆ. ಈ ನಡುವೆ ರವೀಂದರ್ ಬಗ್ಗೆಯೂ ಮೌನ ಮುರಿದಿದ್ದಾರೆ.
ನ್ಯೂಸ್ ನಾಟೌಟ್: “ಮದುವೆಗೂ ಮುನ್ನವೇ ನನಗೆ ಇದ್ಯಾವುದೂ ಗೊತ್ತಿರಲಿಲ್ಲ. ನನ್ನ ಬಳಿ ಈ ವಿಚಾರಗಳನ್ನೂ ರವೀಂದರ್ ನನ್ನ ಮುಂದೆ ಹೇಳಿಕೊಂಡಿರಲಿಲ್ಲ. ನನ್ನನ್ನು ಮೋಸ ಮಾಡಿ ಮದುವೆಯಾಗಿದ್ದಾನೆ” ಎಂದು ಮಹಾಲಕ್ಷ್ಮೀ, ಪತಿ ರವೀಂದರ್ ಬಗ್ಗೆ ತಮ್ಮ ಆಪ್ತ ವಲಯದ ಮುಂದೆ ಹೇಳಿಕೊಂಡಿದ್ದಾರೆ ಎಮದು ವರದಿ ತಿಳಿಸಿದೆ.