ಸಂಪ್ಯ: ದಕ್ಷಿಣ ಕನ್ನಡ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ ಪ್ರಕರಣ ಸಂಬಂಧಿಕರಿಂದಲೇ ನಿಗೂಢವಾಗಿ ಹತ್ಯೆಯಾಗಿದ್ದ ಮೈಸೂರಿನ ಫೋಟೋ ಗ್ರಾಫರ್ ಜಗದೀಶ್ ಕೊಲೆ ಪ್ರಕರಣದ ರಹಸ್ಯವನ್ನು ಭೇದಿಸಿದ ಪೊಲೀಸ್ ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ್ ಸೋನಾವನೆ ಭರ್ಜರಿ ನಗದು ಬಹುಮಾನ ಘೋಷಿಸಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ್ ಸೋನಾವನೆ, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಡಾ ಶಿವ ಕುಮಾರ್ ಮಾರ್ಗದರ್ಶನದಂತೆ ಇಡೀ ತಂಡದ ನೇತೃತ್ವವನ್ನು ಡಾ ಗಾನ ಪಿ ಕುಮಾರ್ ವಹಿಸಿಕೊಂಡಿದ್ದರು. ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದ ಉಮೇಶ್ ಉಪ್ಪಳಿಕೆ, ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಉದಯ ರವಿ ಎಂ ವೈ, ಅಪರಾಧ ವಿಭಾಗ ಉಪ ನಿರೀಕ್ಷಕ ಅಮೀನ್ ಸಾಬ್ ಅತ್ತಾರ್, ಪಿಎಸ್ಐ ಶ್ರೀಕಾಂತ್ ರಾಥೋಡ್, ಸಿಬ್ಬಂದಿಗಳಾದ ಎಎಸ್ಐ ಜಗನ್ನಾಥ, ಶಿವರಾಮ್ ಎಚ್, ಧರ್ಣಪ್ಪ ಗೌಡ, ಸಲೀಂ, ದೇವರಾಜ್, ಅದ್ರಾಮ್, ಸ್ಕರಿಯ, ಪ್ರಶಾಂತ್ ರೈ, ಪ್ರವೀಣ್ ರೈ ಪಾಲ್ತಾಡಿ, ಪ್ರಶಾಂತ, ಕೃಷ್ಣಪ್ಪ ಗೌಡ, ಲಕ್ಷ್ಮೀಶ ಗೌಡ, ಜಗದೀಶ್ ಅತ್ತಾಜೆ, ಹರ್ಷಿತ್, ಲೋಕೇಶ್, ಗಿರೀಶ್ ರೈ, ಮುನಿಯ ನಾಯ್ಕ್, ಗುಡದಪ್ಪ ತೋಟದ್, ಧನ್ಯಶ್ರೀ, ಗಾಯತ್ರಿ, ಸಂಪತ್, ದಿವಾಕರ್, ಚಾಲಕರಾದ ಹರೀಶ್ ನಾಯ್ಕ್, ನವಾಝ್ ಬುಡ್ಕಿ ಮತ್ತು ವಿನೋದ್ ನೇತೃತ್ವದ ತಂಡ ಚಾಣಾಕ್ಷತನದಿಂದ ಇಡೀ ಪ್ರಕರಣವನ್ನು ಭೇದಿಸಿತ್ತು.
ಕೊಲೆ ಮಾಡಿ ಮಣ್ಣಿನಡಿ ಹೂತ್ತಿಟ್ಟಿದ್ದರು
ಜಗದೀಶ್ ವೃತ್ತಿ ನಿರತ ಫೋಟೋ ಗ್ರಾಫರ್, ಮೈಸೂರಿನವರು. ಅಲ್ಲಿದ್ದರೂ ಕೂಡ ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಕುಂಜೂರು ಪಂಜ ಎಂಬಲ್ಲಿ ಜಮೀನು ಖರೀದಿಸಿದ್ದರು. ಇದನ್ನು ನೋಡಿಕೊಳ್ಳಲು ತಮ್ಮ ಸಂಬಂಧದಲ್ಲಿ ಮಾವನಾಗಿರುವ ಪಟ್ಲಡ್ಕದ ಸುಬ್ಬಯ್ಯ ಯಾನೆ ಬಾಲಕೃಷ್ಣ ರೈ ಅವರಿಗೆ ಜವಾಬ್ದಾರಿ ವಹಿಸಿದ್ದರು. ಅಪರೂಪಕ್ಕೊಮ್ಮೆ ಬರುವ ಜಗದೀಶ್ ವಿಶ್ವಾಸಕ್ಕೆ ದ್ರೋಹ ಬಗೆದ ಸುಬ್ಬಯ್ಯ ಜಾಗವನ್ನು ತನ್ನ ಹೆಸರಿಗೆ ಮಾಡಿಕೊಂಡು ಅರ್ಧ ಜಾಗವನ್ನು ಬೇರೆಯವರಿಗೆ ಮಾರಿದ್ದ. ಒಂದು ದಿನದ ಹಠಾತ್ ಜಗದೀಶ್ ತಮ್ಮ ಜಮೀನನ್ನು ನೋಡಲು ಮೈಸೂರಿನಿಂದ ಬರುವುದಾಗಿ ತಿಳಿಸಿದಾಗ ಸುಬ್ಬಯ್ಯ ಗಾಬರಿಯಾದ, ಬೇರೆಯವರಿಗೆ ಜಾಗ ಮಾರಿರುವ ವಿಚಾರ ತಿಳಿದರೆ ಏನು ಗತಿ ಎಂದು ತಿಳಿದು ಜಗದೀಶನ ಕತೆ ಮುಗಿಸಲು ಮುಂದಾದ. ಇದಕ್ಕೆ ಮಗ ಪ್ರಶಾಂತ್, ನೆರೆಮನೆಯಾತ ಪಟ್ಲಡ್ಕ ಸಂಜೀವ ಗೌಡನ ಮಗ ಜೀವನ್ ಪ್ರಸಾದ್ ಸಹಾಯವನ್ನು ಪಡೆದುಕೊಂಡ. ಪತ್ನಿ ಜಯ ಲಕ್ಷ್ಮೀಯೂ ಸಾಥ್ ನೀಡಿದಳು. ಇವರೆಲ್ಲರಿಗೆ ಮಾರ್ಗದರ್ಶಿಯಾಗಿ ತಿಂಗಳಾಡಿಯ ಉಮೇಶ್ ರೈ ಕೊಲೆ ಆರೋಪಿ ಅನಿಲೆ ಜಯರಾಜ್ ಶೆಟ್ಟಿ ಇದ್ದ. ಅಂದುಕೊಂಡಂತೆ ಇವರು ಜಗದೀಶನನ್ನು ನ.೧೮ರಂದು ಕಾರಿನೊಳಗೆ ಕುಳ್ಳಿರಿಸಿಕೊಂಡು ತಲೆಗೆ ರಾಡ್ ನಿಂದ ಹೊಡೆದು, ಬಳಿಕ ಚಾಕು ಚುಚ್ಚಿ ಕೊಲೆ ಮಾಡಿದ್ದರು. ನಂತರ ಮುಗುಳಿ ಅರಣ್ಯ ಪ್ರದೇಶದಲ್ಲಿ ಗುಂಡಿ ಅಗೆದು ಹೂತು ಹಾಕಿದ್ದರು. ಇತ್ತ ಮೈಸೂರಿನಲ್ಲಿ ಪತ್ನಿಯೂ ಗಂಡ ಮನೆಗೆ ಬಾರದೆ ಇರುವುದನ್ನು ಗಮನಿಸಿ ಪೊಲೀಸ್ ದೂರು ನೀಡಲು ಮುಂದಾದರು. ಅಂತೆಯೇ ಜಗದೀಶ್ ಅಣ್ಣ ಶಶಿಧರ ಕಾವೂರು ಸಂಪ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.