ನ್ಯೂಸ್ ನಾಟೌಟ್: ಮಂಗಳೂರಿನ ಉರ್ವ ಸ್ಟೋರ್ನ ಚಿಲಿಂಬಿ ಬಳಿ ಅಕ್ರಮವಾಗಿ ರಿಕ್ಷಾದಲ್ಲಿ ಗೋಮಾಂಸ ಸಾಗಾಟ ಮಾಡುತ್ತಿದ್ದ ವ್ಯಕ್ತಿ ಮತ್ತು 2.50 ಕ್ವಿಂಟಾಲ್ ಮಾಂಸವನ್ನು ಬಜರಂಗದಳದ ಕಾರ್ಯಕರ್ತರು ಪತ್ತೆಹಚ್ಚಿ ಪೊಲೀಸರಿಗೊಪ್ಪಿಸಿದ್ದಾರೆ.
ಬೆಳ್ಳಂಬೆಳಗ್ಗೆ ಗೋಮಾಂಸವನ್ನು ಜೋಕಟ್ಟೆಯಿಂದ ರಿಕ್ಷಾದಲ್ಲಿ ನಗರದ ಬೀಫ್ ಸ್ಟಾಲ್ಗಳಿಗೆ ಸಾಗಾಟ ಮಾಡಲಾಗುತ್ತಿತ್ತು. ಗೋಮಾಂಸ ಸಾಗಾಟದ ಮಾಹಿತಿ ತಿಳಿದು ಬಜರಂಗದಳದ ಕಾರ್ಯಕರ್ತರು 6 ಗಂಟೆಯ ವೇಳೆಗೆ ಚಿಲಿಂಬಿಯಲ್ಲಿ ರಿಕ್ಷಾವನ್ನು ತಡೆದು ಆರೋಪಿಯನ್ನು ಮಾಲು ಸಹಿತ ಪೊಲೀಸರಿಗೊಪ್ಪಿಸಿದ್ದಾರೆ. ಐದು ಗೋವುಗಳ 2.50 ಕ್ವಿಂಟಾಲ್ ಮಾಂಸವನ್ನು ರಿಕ್ಷಾದಲ್ಲಿ ಸಾಗಾಟ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಜೋಕಟ್ಟೆಯ ಬದ್ರು ಎಂಬಾತನಿಗೆ ಸೇರಿದ ಈ ಗೋಮಾಂಸವನ್ನು ದಾವೂದ್ ಎಂಬಾತ ರಿಕ್ಷಾದಲ್ಲಿ ಸಾಗಾಟ ಮಾಡುತ್ತಿದ್ದ. ಈ ಮಾಂಸ ಮಾರುಕಟ್ಟೆಯ ಮಾಂಸದಂಗಡಿಯ ಯಾಸಿನ್ ಎಂಬಾತನಿಗೆ ಸಾಗಾಟ ಮಾಡಲಾಗುತ್ತಿತ್ತು. ಎರಡು ತಿಂಗಳಿನಿಂದ ಈ ರೀತಿಯಲ್ಲಿ ಮಾಂಸ ಸಾಗಾಟ ಮಾಡಲಾಗುತ್ತಿದೆ ಎಂದು ಆರೋಪಿ ಬಜರಂಗದಳದ ಕಾರ್ಯಕರ್ತರಲ್ಲಿ ಹೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಉರ್ವ ಠಾಣಾ ಪೊಲೀಸರು ಆಗಮಿಸಿ ಆರೋಪಿ ಹಾಗೂ ಸೊತ್ತನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿ, ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.