ಕೊಡಗು ಜಿಲ್ಲಾ ವ್ಯಾಪ್ತಿಯ ಭಾಗಮಂಡಲ ಪೊಲೀಸ್ ಠಾಣೆ ಸರಹದ್ದಿನಲ್ಲಿ ಅಕ್ರಮವಾಗಿ ಮದ್ಯ ತಯಾರಿಸುತ್ತಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಿ ಕೊಡಗು ಜಿಲ್ಲಾ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಶ್ರೀ ಎಂ.ಜಗದೀಶ್, ಡಿಎಸ್ಪಿ, ಮಡಿಕೇರಿ ಉಪವಿಭಾಗ, ಶ್ರೀ ಅನೂಪ್ ಮಾದಪ್ಪ, ಸಿಪಿಐ, ಮಡಿಕೇರಿ ಗಾಮಾಂತರ ವೃತ್ತ ಮತ್ತು ಶ್ರೀಮತಿ ಶೋಭಾ ಲಮಾಣಿ, ಪಿಎಸ್ಐ, ಭಾಗಮಂಡಲ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳು ಮತ್ತು ಡಿಸಿಆರ್ಬಿ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ಆ.೩೧ ರಂದು ಕಾರ್ಯಾಚರಣೆ ಕೈಗೊಂಡಿದ್ದಾರೆ.
ತಾವೂರು ಗ್ರಾಮದಲ್ಲಿ ತೋಟದ ಲೈನ್ ಮನೆಯೊಂದರಲ್ಲಿ ಕೇರಳ ಮೂಲದ ವ್ಯಕ್ತಿ ಅಕ್ರಮವಾಗಿ ಮಾನವನ ಜೀವಕ್ಕೆ ಧಕ್ಕೆಯಾಗುವಂತಹ ಹಾಗೂ ಅಮಲೆರಿಸುವ ಪದಾರ್ಥವನ್ನು ಬಳಸಿ ಮಧ್ಯವನ್ನು ತಯಾರಿಸುವುದು ಹಾಗೂ ತಯಾರಿಸಿದ ಮಧ್ಯವನ್ನು ಕೇರಳ ರಾಜ್ಯದಲ್ಲಿ ಮಾರಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ಪೊಲೀಸರು ದಾಳಿ ನಡೆಸಿದ್ದರು.
ತಾವೂರು ಗ್ರಾಮ ನಿವಾಸಿಯಾದ ಹಾಸೀಂ, (47) ಎಂಬುವವನನ್ನು ವಶಪಡಿಸಿಕೊಂಡ ಪೊಲೀಸರು ಮದ್ಯ ತಯಾರಿಸಲು ಬಳಸುವ 60 ಕೆ.ಜಿ 300 ಗ್ರಾಂ CAUSTIC CARAMEL ಮತ್ತು 2000 ಖಾಲಿ ಬಾಟಲ್ & ಲೆಬಲ್, ಕ್ಯಾಪ್ಗಳನ್ನು ವಶಪಡಿಸಿಕೊಂಡಿದ್ದು, ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಈ ಪ್ರಕರಣದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಕೊಡಗು ಜಿಲ್ಲೆಯ ಐಪಿಎಸ್ ಅಧಿಕಾರಿ ಶ್ರೀ ಕೆ.ರಾಮರಾಜನ್ ಶ್ಲಾಘಿಸಿದ್ದಾರೆ.