ನ್ಯೂಸ್ ನಾಟೌಟ್: ಮಂಗಳೂರಿನಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಪತ್ತೆ ಹಚ್ಚಿ ಕುಖ್ಯಾತ ಡ್ರಗ್ ಪೆಡ್ಲರ್ಗಳನ್ನು ಬಂಧಿಸಿ ಅವರಿಂದ 2.6 ಲಕ್ಷ ಮೌಲ್ಯದ MDMA ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರನ್ನು ಕಾಟಿಪಳ್ಳ ನಿವಾಸಿ ಶಾಕೀಬ್ ಅಲಿಯಾಸ್ ಶಬ್ಬು(33), ಚೊಕ್ಕಬೆಟ್ಟು ನಿವಾಸಿ ನಿಸಾರ್ ಹುಸೈನ್ ಅಲಿಯಾಸ್ ನಿಚ್ಚು (34 ) ಎಂದು ಗುರುತಿಸಲಾಗಿದೆ.
ಬಂಧಿತರಿಂದ ಒಟ್ಟು 52 ಗ್ರಾಂ ತೂಕದ 2,60,000 ರೂ.ಮೌಲ್ಯದ ಎಂಡಿಎಂಎ ಮಾದಕ ವಸ್ತು, ಕಾರು, 2 ಮೊಬೈಲ್ ಫೋನು, ನಗದು 1,800 ರೂ., ಡಿಜಿಟಲ್ ತೂಕ ಮಾಪನವನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 7,83,300 ರೂ. ಆಗಬಹುದು ಎಂದು ಅಂದಾಜಿಸಲಾಗಿದೆ.
ಪೆಡ್ಲರ್ಗಳು ಸಿಕ್ಕಿ ಬಿದ್ದದ್ದು ಹೇಗೆ..?
ಈ ಪೆಡ್ಲರ್ಗಳು ಇಡೀ ಮಂಗಳೂರಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ತಮಗೆ ಬೇಕಾದ ಕಡೆ ಮಾರಾಟಕ್ಕೆ ವ್ಯವಸ್ಥೆ ಮಾಡಿದ್ದರು. ಇದೇ ರೀತಿ ಸುರತ್ಕಲ್ ತಡಂಬೈಲ್ ಪರಿಸರದ ಬೀಚ್ ರಸ್ತೆಯಲ್ಲಿ ಕಾರಿನಲ್ಲಿ ಇಬ್ಬರು ಅಕ್ರಮವಾಗಿ ಮಾದಕ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಘಟಕದ ಎಸಿಪಿ ಪಿ.ಎ. ಹೆಗಡೆ ನೇತೃತ್ವದ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಆರೋಪಿಗಳ ಪೈಕಿ ಶಾಕೀಬ್ ಎಂಬಾತನ ವಿರುದ್ಧ ಈ ಹಿಂದೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಮೂರು ಕಳವು ಪ್ರಕರಣಗಳು, ಕೊಲೆ ಯತ್ನ ಪ್ರಕರಣ, ಹಲ್ಲೆ ಪ್ರಕರಣ, ಬಜ್ಪೆ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ, ಬಂದರ್ ಠಾಣೆಯಲ್ಲಿ ದ್ವಿಚಕ್ರ ವಾಹನ ಕಳ್ಳತನ, ಬರ್ಕೆ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ, ಮೂಡುಬಿದಿರೆ ಠಾಣೆಯಲ್ಲಿ ಸರ ಕಳ್ಳತನ ಪ್ರಕರಣ, ಕಾರ್ಕಳ ನಗರ ಠಾಣೆ, ಕಾರ್ಕಳ ಗ್ರಾಮಾಂತರ ಠಾಣೆ, ಶಿವ ಠಾಣೆಗಳಲ್ಲಿ ಸರಕಳ್ಳತನ ಪ್ರಕರಣ, ಮಣಿಪಾಲದಲ್ಲಿ ದರೋಡೆ ಪ್ರಕರಣ ಹೀಗೆ ಒಟ್ಟು 13 ಪ್ರಕರಣಗಳು ದಾಖಲಾಗಿವೆ. ನ್ಯಾಯಾಲಯದಿಂದ ಜಾಮೀನ ಮೇಲೆ ಬಿಡುಗಡೆಗೊಂಡ ಬಳಿಕ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಹಾಗಾಗಿ ಈತನ ವಿರುದ್ಧ ನ್ಯಾಯಾಲಯವು ವಾರಂಟ್ ಹೊರಡಿಸಿತ್ತು.
ಮತ್ತೋರ್ವ ಆರೋಪಿ ನಿಸಾರ್ ಹುಸೈನ್ ನಿಚ್ಚು ಎಂಬಾತನ ವಿರುದ್ಧ ಈ ಹಿಂದೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ, ಕೊಲೆಯತ್ನ ಪ್ರಕರಣ, ಬರ್ಕೆ ಠಾಣೆಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ ಹಾಗೂ ಕೊಲೆಯತ್ನ ಪ್ರಕರಣ, ಮೂಲ್ಕಿ ಠಾಣೆಯಲ್ಲಿ ಕಳವು ಪ್ರಕರಣ, ಕದ್ರಿ ಠಾಣೆ, ಉಪ್ಪಿನಂಗಡಿ, ಸಕಲೇಶಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳನ್ನು ಅಡ್ಡಗಟ್ಟಿ ದರೋಡೆ ನಡೆಸಿದ 3 ಪ್ರಕರಣಗಳು, ಪಾಂಡೇಶ್ವರ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ಹೀಗೆ 9 ಪ್ರಕರಣಗಳು ದಾಖಲಾಗಿದೆ. ಅಲ್ಲದೆ ಈ ಪ್ರಕರಣಗಳಿಗೆ ಸಂಬಂಧಿಸಿ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಬಿಡುಗಡೆಗೊಂಡ ಬಳಿಕ ಮತ್ತೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದು, ಈತನ ವಿರುದ್ಧ 7 ವಾರಂಟ್ ಜಾರಿಯಲ್ಲಿದೆ. ಇತ್ತೀಚೆಗೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕ್ರಿಕೆಟ್ ಪಂದ್ಯಾಟದ ವೇಳೆಯಲ್ಲಿ ನಡೆದ ಗಲಾಟೆಯಲ್ಲಿ ಯುವಕನೊಬ್ಬನ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಕೂಡ ಈತ ಭಾಗಿಯಾಗಿದ್ದು, ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸದ್ಯ ಆರೋಪಿಗಳ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತ್ತೆ ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ನಿರೀಕ್ಷಕ ಶ್ಯಾಮ್ ಸುಂದರ್ ಎಚ್.ಎಂ., ಎಸ್ಸೈಗಳಾದ ರಾಜೇಂದ್ರ ಬಿ., ಶರಣಪ್ಪ ಭಂಡಾರಿ, ಸುದೀಪ್ ಎಂ.ವಿ, ನರೇಂದ್ರ ಹಾಗೂ ಸಿಸಿಬಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.