ನ್ಯೂಸ್ ನಾಟೌಟ್: ಬೆಂಗಳೂರಿನ ಸೀರೆ ಮಳಿಗೆಗಳಿಗೆ ಗ್ರಾಹಕರ ಸೋಗಿನಲ್ಲಿ ಹೋಗಿ ಲಕ್ಷಾಂತರ ಮೌಲ್ಯದ ಸೀರೆಗಳನ್ನು ಕದಿಯುತ್ತಿದ್ದ ಆಂಧ್ರಪ್ರದೇಶ ಮೂಲದ ಖತರ್ನಾಕ್ ಕಳ್ಳಿಯರ ಗ್ಯಾಂಗನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ಆಂಧ್ರಪ್ರದೇಶದ ಗುಂಟೂರು ಮೂಲದ ರಮಣ, ರತ್ನಾಲು, ಚುಕ್ಕಮ್ಮ ಎಂದು ಗುರುತಿಸಲಾಗಿದೆ.
ಈ ಕಳ್ಳಿಯರು ಅಂತಿಂಥ ಕಳ್ಳಿಯರಲ್ಲ. ಇವರು ಸೀರೆ ಶೂರೂಂಗಳಿಗೆ ಹೋಗುವಾಗ ಮೈತುಂಬಾ ಒಡವೆ ಹಾಕಿಕೊಂಡು ಸ್ಕಾರ್ಪಿಯೋ ವಾಹನದಲ್ಲಿ ಮಳಿಗೆಗಳಿಗೆ ಭೇಟಿ ನೀಡುತ್ತಾರೆ. ಬಳಿಕ ನಮ್ಮ ಕುಟುಂಬದಲ್ಲಿ ಮದುವೆ ಇದೆ ಇದಕ್ಕೆ ಬೇಕಾದ ಲಕ್ಷಾಂತರ ಮೌಲ್ಯದ ಸೀರೆಗಳನ್ನು ತೋರಿಸುವಂತೆ ಹೇಳುತ್ತಾರೆ. ಸಿಬ್ಬಂದಿ ಹತ್ತಾರು ಸೀರೆಗಳನ್ನು ತೋರಿಸುತ್ತಿರುವಾಗಲೇ ಈ ಕಳ್ಳಿಯರು ಮೈ ಮೇಲೆ ಹಾಕಿಕೊಂಡು ನೋಡುತ್ತಾರೆ. ಆಗ ಈ ಸೀರೆ ಬೇಡ ಬೇರೆ ತೋರಿಸಿ ಎಂದು ಹೇಳಿ ಆಕೆ ಬೇರೆ ಸೀರೆ ತರಲು ಹೋದಾಗ ಒಂದೊಂದು ಸೀರೆಗಳನ್ನು ಕದ್ದು ತನ್ನ ಉಟ್ಟ ಸೀರೆಯೊಳಗೆ ಮರೆಯಾಗಿ ಇಟ್ಟುಕೊಳ್ಳುತ್ತಾರೆ. ಹೀಗೆ ಮಳಿಗೆಗಳ ಸಿಬ್ಬಂದಿಯನ್ನು ಯಾಮಾರಿಸುತ್ತಾರೆ.
ಈ ಕಳ್ಳಿಯರು ಲಕ್ಷಾಂತರ ಮೌಲ್ಯದ ಸೀರೆಗಳನ್ನು ಕದ್ದು ಉಟ್ಟ ಸೀರೆಯೊಳಗೆ ಬಚ್ಚಿಟ್ಟು ಮಳಿಗೆಯಿಂದ ಹೊರಗೆ ಬರುವಾಗ ಒಂದು ಸೀರೆ ಮಹಿಳೆಯ ಕಾಲುಗಳ ಎಡೆಯಿಂದ ಕೆಳಗೆ ಬೀಳುತ್ತದೆ. ಇದನ್ನು ಗಮನಿಸಿದ ಸೆಕ್ಯೂರಿಟಿ ಗಾರ್ಡ್ ತಕ್ಷಣ ಮಳಿಗೆಯ ಮಾಲೀಕರ ಗಮನಕ್ಕೆ ತರುತ್ತಾನೆ. ಆಗ ಸೀರೆ ಮಳಿಗೆಯ ಸಿಸಿಟಿವಿ ಕ್ಯಾಮರಾ ಚೆಕ್ ಮಾಡುವಾಗ ಈ ಕಳ್ಳಿಯರ ನಿಜ ಬಣ್ಣ ಬಯಲಾಗಿದೆ. ತಕ್ಷಣ ಸಿಸಿಟಿವಿ ದೃಶ್ಯ ಆಧರಿಸಿ ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಈ ಗುಂಟೂರು ಗ್ಯಾಂಗ್ ನಗರದಲ್ಲಿ 10ಕ್ಕೂ ಹೆಚ್ಚು ಕಡೆ ಕಳವು ಮಾಡಿರುವುದು ಬೆಳಕಿಗೆ ಬಂದಿದೆ.