ನ್ಯೂಸ್ ನಾಟೌಟ್: ಬಾಲ್ಯದ ದಿನಗಳಲ್ಲಿ ಚಂದಮಾಮನ ನೋಡಿಕೊಂಡೇ ಅಮ್ಮನ ಕೈ ತುತ್ತು ತಿಂದು, ಅಮ್ಮ ಆ ಚಂದ ಮಾಮನನ್ನು ತಂದು ಕೊಡು ಅಂತ ಹಠ ಹಿಡಿದಿದ್ದ ಹುಡುಗಿ ಇಂದು ಚಂದ್ರಯಾನ-3ರಲ್ಲಿ ಭಾಗಿಯಾಗಿ ತನ್ನ ಅಧಮ್ಯ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಸಾವಿರಾರು ಸಂಶೋಧನಾ ವಿದ್ಯಾರ್ಥಿಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಜ್ಜಾವರದ ವಿದ್ಯಾರ್ಥಿನಿ ಮಾನಸ ಜಯ ಕುಮಾರ್ ಸ್ಫೂರ್ತಿಯಾಗಿದ್ದಾರೆ. ಇಸ್ರೊ ನಿರ್ಮಿತ ಚಂದ್ರಯಾನ-3 ಭಾರತದ ಪಾಲಿಗೆ ಐತಿಹಾಸಿಕ ಕ್ಷಣ. ಸುಳ್ಯದ ಪಾಲಿಗೂ ಸ್ಮರಣೀಯ ದಿನ ಅನ್ನೋದು ವಿಶೇಷ.
ಸರ್ಕಾರಿ ಕನ್ನಡ ಶಾಲೆಯಲ್ಲಿ ಓದಿ ಇಸ್ರೋ ಪ್ರಯೋಗ ಶಾಲೆಯ ಒಡನಾಟ ಪಡೆದ ಹುಡುಗಿಯ ಕಥೆಯೇ ರೋಚಕ. ಬಾಲ್ಯದಲ್ಲೇ ಇವರ ತಂದೆ ಬಾಲಕೃಷ್ಣ ನಿಧನರಾದರು. ಬಳಿಕ ಇವರ ತಾಯಿ ಕುಸುಮಾವತಿ ತಂದೆಯಾಗಿಯೂ ಮಾನಸ, ಅಕ್ಕ ಜ್ಯೋತಿ, ತಂಗಿ ಲಿಖಿತಾಳನ್ನು ಸಾಕಿ ಸಲಹಿದರು. ಮಾನಸ ಜೀವನದಲ್ಲಿ ಖುಷಿಗಿಂತ ಹೆಚ್ಚು ಕಷ್ಟ ಹಾದಿಯನ್ನೇ ತುಳಿದವರು. ಅಜ್ಜಾವರದ ಹಳ್ಳಿ ಮೂಲೆಯಿಂದ ಮಣಭಾರದ ಶಾಲಾ ಬ್ಯಾಗ್ ಹಿಡಿದುಕೊಂಡು ಸರ್ಕಾರಿ ಕನ್ನಡ ಶಾಲೆಗೆ ಬರುತ್ತಿದ್ದ ದಿನಗಳಿಂದಲೇ ಮಾನಸ ಪ್ರತಿಭಾವಂತೆ. ಓದಿನಲ್ಲಿ ಮುಂದು. ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಆಸಕ್ತಿ. ಕಲಿಕೆಯಲ್ಲಿ ಮುಂದಿದ್ದರೂ ಈಕೆಗೆ ಆರ್ಥಿಕ ಹಿನ್ನಡೆಯಿಂದ ಮುಂದುವರಿಯುವುದು ಕಷ್ಟವಾಯಿತು. ಈ ನಡುವೆ ಸುಳ್ಯದ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿಎಸ್ಸಿ ವಿಷಯದಲ್ಲಿ ಪದವಿ ಪಡೆದುಕೊಂಡರು. ಬಳಿಕ ಮಂಗಳೂರು ವಿವಿಯಿಂದ ಸಾಗರ ಭೂ ವಿಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡರು. ಸದ್ಯ ಪಿಹೆಚ್ ಡಿ ಅಧ್ಯಯನ ನಡೆಸುತ್ತಿರುವ ಮಾನಸ ಭವಿಷ್ಯದಲ್ಲಿ ಇನ್ನಷ್ಟು ಸಾಧಿಸುವ ಕನಸು ಕಾಣುತ್ತಿದ್ದಾರೆ.
ಚಂದ್ರಯಾನ-3ರಲ್ಲಿ ಮಾನಸ ತನ್ನ ಅಳಿಲು ಸೇವೆಯನ್ನು ಮಾಡಿದ್ದಾರೆ. ಸಿಗ್ನಲ್ಸ್ ವಿಭಾಗದಲ್ಲಿ ಮಾನಸ ಕೆಲಸ ನಿರ್ವಹಿಸಿದ್ದಾರೆ. ಸಣ್ಣ ಸಮೂಹವನ್ನು ಹೊಂದಿದ್ದ ತಂಡದಲ್ಲಿ ಮಾನಸ ಕೆಲಸ ಮಾಡಿದ್ದಾರೆ. ಅಂದರೆ ಚಂದ್ರನಿಂದ ಭೂಮಿಗೆ ಬರುವ ಸಿಗ್ನಲ್ಸ್ ಅನ್ನು ರವಾನಿಸುವ ಸಾಧನಾ ಆಂಟೇನಾವನ್ನು ವಿಜ್ಞಾನಿಗಳ ತಂಡ ಅಭಿವೃದ್ಧಿಪಡಿಸಿತ್ತು. ಈ ಆ್ಯಂಟೇನಾವು ಸಂದೇಶ ಕಳಿಸುವುದಲ್ಲದೆ ಇತರೆ ಗ್ರಹಗಳಿಂದ ಆಗುವ ಸಂಭವನೀಯ ಅಪಾಯಗಳು ಮತ್ತಿತರ ಮಹತ್ತರ ಸಂದೇಶವನ್ನು ಭೂಮಿಗೆ ಕಳಿಸುತ್ತದೆ. ಇದರ ಸಹಾಯದಿಂದಲೇ ಚಂದ್ರಯಾನ-3 ರಕ್ಷಣಾ ನಿರ್ವಹಣೆ ಸಾಧ್ಯವಾಗುತ್ತದೆ. ಈ ಆ್ಯಂಟೇನಾದ ಬಗ್ಗೆ ಸಂಶೋಧನಾ ವಿದ್ಯಾರ್ಥಿನಿಯಾಗಿ ಮಾನಸ ಕೆಲಸ ಮಾಡಿದ್ದಾರೆ. ಹೆಚ್ಚಿನ ಅಧ್ಯಯನ ನಡೆಸಿ ವರದಿ ಮಾಡಿದ್ದಾರೆ.
ಚಂದ್ರಯಾನ-3 ಆರಂಭವಾಗುವ ಮುನ್ನ ಸಂಶೋಧನಾ ತಂಡದ ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಇದರಲ್ಲಿ 900 ಮಂದಿ ಭಾಗಿಯಾಗಿದ್ದರು. ಅಂತಿಮವಾಗಿ ಸೌಥರ್ನ್ ಕರ್ನಾಟಕದಿಂದ ಮಾನಸ ಒಬ್ಬಳೇ ಆಯ್ಕೆಯಾಗಿದ್ದರು ಅನ್ನೋದು ಹೆಮ್ಮೆಯ ವಿಚಾರ.
ಮಾನಸ ಕನ್ನಡ ಮಾಧ್ಯಮದಲ್ಲಿ ಓದಿದವರು. ಸಾಮಾನ್ಯವಾಗಿ ಅವರಿಗೆ ಇಂಗ್ಲಿಷ್ ಮಾತನಾಡುವುದು, ವ್ಯವಹಾರ ನಡೆಸುವುದು ಕಷ್ಟವಾಗಿತ್ತು. ಇಸ್ರೋ ಪ್ರಾಜೆಕ್ಟ್ ನಲ್ಲಿ ಭಾಗಿಯಾದ ನಂತರ ಎಲ್ಲವೂ ಇಂಗ್ಲಿಷ್ ನಲ್ಲಿತ್ತು. ಜೊತೆಗೆ ಹಿಂದಿಯಲ್ಲೂ ಕೆಲಸ ನಿರ್ವಹಿಸಬೇಕಿತ್ತು. ಈ ಎರಡನ್ನೂ ಮ್ಯಾನೇಜ್ ಮಾಡಿಕೊಂಡು ಮುನ್ನಡೆದದ್ದು ದೊಡ್ಡ ಸಾಧನೆ ಎನ್ನುತ್ತಾರೆ ಮಾನಸ.
ಭವಿಷ್ಯದಲ್ಲಿ ವಿಜ್ಞಾನಿಯಾಗುವ ಕನಸನ್ನು ಕಾಣುತ್ತಿದ್ದೇನೆ ಎಂದು ಮಾನಸ ನ್ಯೂಸ್ ನಾಟೌಟ್ ಜೊತೆಗೆ ಮಾತನಾಡುತ್ತ ತಮ್ಮ ಖುಷಿಯನ್ನು ಹಂಚಿಕೊಂಡರು. ನನ್ನ ಅಧ್ಯಯನಕ್ಕೆ ನನ್ನ ಪತಿ ಜಯ ಕುಮಾರ್ ಪ್ರೋತ್ಸಾಹ ನೀಡುತ್ತಿದ್ದಾರೆ. ಕುಟುಂಬ ವರ್ಗದ ಬೆಂಬಲವೂ ಇದೆ. ಮುಂದೆ ನಾನು ವಿಜ್ಞಾನಿಯಾಗಬೇಕೆಂಬ ಕನಸು ಕಂಡಿದ್ದೇನೆ. ಕಲ್ಪನಾ ಚಾವ್ಲಾ ರಂತೆ ಗಗನಯಾತ್ರಿ ಆಗಬೇಕು ಅನ್ನುವುದು ನನ್ನ ಜೀವನದ ದೊಡ್ಡ ಕನಸಾಗಿತ್ತು. ಆದರೆ ನಾನು ದೈಹಿಕವಾಗಿ ಅಷ್ಟೊಂದು ಎತ್ತರವಿಲ್ಲದ ಕಾರಣ ನನಗೆ ಅವಕಾಶ ಸಿಗುವುದು ಕಷ್ಟ. ಆದರೂ ಪ್ರಯತ್ನ ಪಡುವುದಾಗಿ ಮಾನಸ ತಿಳಿಸಿದ್ದಾರೆ.