ನ್ಯೂಸ್ ನಾಟೌಟ್: ಹುಡುಗಿಯರನ್ನು ಪ್ರೇಮದ ಬಲೆಗೆ ಬೀಳಿಸುವುದಕ್ಕಾಗಿ ಕೆಲವು ಯುವಕರು ಬಗೆಬಗೆಯ ಸುಳ್ಳು ಹೇಳುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಯುವಕ ಮಂಗಳೂರಿನಲ್ಲಿ ನಾನು ಪೊಲೀಸ್ ಎಂದು ಹೇಳಿಕೊಂಡೇ ಪ್ರತಿಷ್ಠಿತ ಕಾಲೇಜೊಂದರ ಇಂಜಿನೀಯರಿಂಗ್ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಯುವತಿ ನೀಡಿದ ದೂರಿನ ಪ್ರಕಾರ ರಾಯಚೂರು ಮೂಲದ ಯಮನೂರ ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ನ್ಯಾಯಾಲಯವು ಆತನಿಗೆ ೧೫ ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಯುವತಿ ನೀಡಿದ ದೂರಿನ ಪ್ರಕಾರ ಆತ ಸಾಮಾಜಿಕ ಜಾಲತಾಣದ ಮೂಲಕ ಯುವತಿಯನ್ನು ಬುಟ್ಟಿಗೆ ಹಾಕಿಕೊಂಡಿದ್ದ, ಇನ್ಸ್ಟಾಗ್ರಾಂ ಮೂಲಕ ಪರಿಚಯವಾದ ಯುವತಿಗೆ ನಾನು ಮಂಗಳೂರಿನ ವಾಮಂಜೂರು ಠಾಣೆಯಲ್ಲಿ ಪಿಎಸ್ಐ ಆಗಿದ್ದೇನೆ ಎಂದು ನಂಬಿಸುತ್ತಾನೆ. ಮಾತ್ರವಲ್ಲ ಯುವತಿಯ ಮನೆಯವರ ವಿಶ್ವಾಸವನ್ನೂ ಗಳಿಸಿಕೊಂಡು ಮಗಳಿಗೆ ಕೆಲಸ ಕೊಡುವುದಾಗಿ ನಂಬಿಸುತ್ತಾನೆ.
ಬಳಿಕ ೨೦೨೩ರಲ್ಲಿ ಮೇ ತಿಂಗಳಲ್ಲಿ ಆಕೆಯನ್ನು ಕದ್ರಿ ದೇವಸ್ಥಾನದಲ್ಲಿ ಭೇಟಿ ಮಾಡಿದ್ದಾನೆ. ಅದೇ ವಾರದಲ್ಲಿ ತಣ್ಣೀರು ಬಾವಿ ಬೀಚ್ಗೆ ಕರೆದುಕೊಂಡು ಹೋಗಿ ಅಲ್ಲಿ ಆಕೆಯೊಂದಿಗೆ ಫೋಟೋ ತೆಗೆದು ನಂತರ ಫೋಟೋವನ್ನು ವೈರಲ್ ಮಾಡುವುದಾಗಿ ಹೆದರಿಸುತ್ತಾನೆ.
ಇದೆಲ್ಲ ಬೆಳವಣಿಗೆಯ ನಂತರ ಆಕೆಯನ್ನು ಬೆಂಗಳೂರಿಗೆ ಬರುವುದಕ್ಕೆ ಹೇಳುತ್ತಾನೆ. ರಾತ್ರಿ ನೆಲಮಂಗಲದ ಲಾಡ್ಜ್ ಗೆ ಕರೆದುಕೊಂಡು ಹೋಗುತ್ತಾನೆ. ಆಕೆಗೆ ಇಷ್ಟವಿಲ್ಲದಿದ್ದರೂ ಬಲವಂತವಾಗಿ ಅತ್ಯಾಚಾರ ಮಾಡುತ್ತಾನೆ.
ಇದೆಲ್ಲ ಆದ ನಂತರ ಮಂಗಳೂರಿನ ಮೂಲ್ಕಿ ಬಳಿಯ ಲಾಡ್ಜ್ ವೊಂದಕ್ಕೂ ಕರೆದುಕೊಂಡು ಹೋಗಿ ಅಲ್ಲಿಯೂ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಸದ್ಯ ಆತ ನೊಂದ ಯುವತಿಯ ನಗ್ನ ಫೋಟೋಗಳನ್ನು ತನ್ನ ಮೊಬೈಲ್ನಲ್ಲಿ ಚಿತ್ರಿಸಿಕೊಂಡು ಆಕೆಯನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮಾತ್ರವಲ್ಲ ಆಕೆಯ ನಗ್ನ ಫೋಟೋ ಮತ್ತು ವಿಡಿಯೋವನ್ನು ಯುವತಿಯ ಮನೆಯವರಿಗೆ ಕಳಿಸಿ ವಿಕೃತಿ ಮೆರೆದಿದ್ದಾನೆ.
ಫೋಟೋಗಳನ್ನು ಡಿಲಿಟ್ ಮಾಡಬೇಕಾದರೆ 1,50,000 ಲಕ್ಷ ರೂ. ಕೊಡಬೇಕೆಂದು ಬೇಡಿಕೆ ಇಟ್ಟಿದ್ದಾನೆ. ಈ ಬಗ್ಗೆ ನೊಂದ ಯುವತಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅ.ಕ್ರ ೬೮/೨೦೨೩ ಕಲಂ: ೩೫೪ ೩೫೪ (ಡಿ), ೩೭೬, ೩೮೪, ೫೦೬, ೧೭೦ ಐಪಿಸಿ ಮತ್ತು ಕಲಂ ೬೭ (ಎ) ಐಟಿ ಆಕ್ಟ್ ಪ್ರಕಾರ ಕೇಸು ದಾಖಲಿಸಲಾಗಿದೆ.
ಮಂಗಳೂರು ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಲೋಕೇಶ್ ಎ.ಸಿ ಅವರು ತನಿಖೆ ನಡೆಸುತ್ತಿದ್ದಾರೆ.