ನ್ಯೂಸ್ ನಾಟೌಟ್: ಕಲ್ಲುಗುಂಡಿ ಸರ್ಕಾರಿ ಶಾಲೆಯಲ್ಲಿ ಹಲವಾರು ವರ್ಷ ಸೇವೆ ಸಲ್ಲಿಸಿ ನೂರಾರು ವಿದ್ಯಾರ್ಥಿಗಳ ಬಾಳಲ್ಲಿ ಬೆಳಕಾಗಿದ್ದ ಯಶೋಧ ಟೀಚರ್ ಸೋಮವಾರ ನಿಧನರಾಗಿದ್ದಾರೆ. ಅಲ್ಪ ಕಾಲದ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು. ಅವರಿಗೆ 73 ವರ್ಷವಾಗಿತ್ತು.
1994 ಜೂನ್ 4ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಲುಗುಂಡಿಯ ಸರ್ಕಾರಿ ಶಾಲೆಯಲ್ಲಿ ಯಶೋಧ ಟೀಚರ್ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು.
ಯಶೋಧ ಟೀಚರ್ ನೂರಾರು ವಿದ್ಯಾರ್ಥಿಗಳಿಗೆ ಆದರ್ಶವಾಗಿದ್ದರು. ಮಕ್ಕಳಲ್ಲಿ ಭೇದ ಭಾವ ಮಾಡದೆ ಎಲ್ಲರಲ್ಲೂ ನಗು ಮೊಗದಿಂದಲೇ ಮಾತನಾಡಿಸುತ್ತಿದ್ದರು. ಇವರು ತರಗತಿಯಲ್ಲಿ ಹೇಳುತ್ತಿದ್ದ ಸಂತಮಣ್ಣ ಹಾಡು ಹಾಗೂ ಗಲಿವರನ ಪಾಠಗಳನ್ನು ಇಂದಿಗೂ ವಿದ್ಯಾರ್ಥಿಗಳು ನೆನಪಿಸಿಕೊಳ್ಳುತ್ತಿದ್ದಾರೆ. ಯಶೋಧ ಟೀಚರ್ ಬಗ್ಗೆ ಕಲ್ಲುಗುಂಡಿಯ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ದಾಮೋದರ ಮಾಸ್ಟ್ರು ಗೂನಡ್ಕ ತಮ್ಮ ಮನದಾಳದ ಅನಿಸಿಕೆ ಹಂಚಿಕೊಂಡಿದ್ದು ಹೀಗೆ, ಯಶೋಧ ಟೀಚರ್ ಹಲವಾರು ವಿದ್ಯಾರ್ಥಿಗಳ ಪಾಲಿಗೆ ಆದರ್ಶರಾಗಿದ್ದರು. ಯಾರ ಮನಸ್ಸನ್ನೂ ಅವರು ನೋಯಿಸಿದವರಲ್ಲ. ಮಕ್ಕಳಿಗೆ ಪಾಠ ಮಾಡುವ ವಿಚಾರದಲ್ಲಿ ಅವರು ಎತ್ತಿದ ಕೈ. ಮನಮುಟ್ಟುವಂತೆ ಪಾಠ ಮಾಡುತ್ತಿದ್ದರು. ನನಗೆ ನೆನಪಿರುವಂತೆ ಏಳನೇ ತರಗತಿಯಲ್ಲಿ ಆಗ ಪಬ್ಲಿಕ್ ಪರೀಕ್ಷೆಯ ಸಮಯ. ನಾವೆಲ್ಲರೂ ಸ್ಪೆಷಲ್ ಕ್ಲಾಸ್ ಮಾಡುವ ವಿಚಾರವನ್ನು ಮಾತನಾಡುತ್ತಿದ್ದೆವು. ಈ ವೇಳೆ ಮೊದಲು ಸ್ಪೆಷಲ್ ಕ್ಲಾಸ್ ನಾನೇ ತೆಗೆದುಕೊಳ್ಳುತ್ತೇನೆ ಎಂದು ಯಶೋಧ ಟೀಚರ್ ಹಠಕ್ಕೆ ಬಿದ್ದಿದ್ದರು. ಅಷ್ಟರ ಮಟ್ಟಿಗೆ ಅವರು ಮಕ್ಕಳಿಗೆ ಪಾಠ ಮಾಡುವ ಕಡೆಗಿನ ತುಡಿತ ಹೊಂದಿದ್ದರು, ಅವರು ಮುಖ್ಯೋಪಾಧ್ಯಾಯರಾಗಿ ಬಡ್ತಿ ಪಡೆದು ಉಪ್ಪಿನಂಗಡಿಯಲ್ಲಿ ಕಾರ್ಯ ನಿರ್ವಹಿಸಿದರು ಎಂದು ದಾಮೋದರ್ ಮಾಸ್ಟ್ರು ಹೇಳಿದರು.
ಯಶೋಧ ಟೀಚರ್ ಬಗ್ಗೆ ಮಾತನಾಡಿದ ಮತ್ತೋರ್ವ ನಿವೃತ್ತ ಶಿಕ್ಷಕಿ ಸವಿತಾ ಅವರು ಹೇಳಿದ್ದು ಹೀಗೆ, ಯಶೋಧ ಟೀಚರ್ ಒಂದು ದಿನವೂ ರಜೆ ಮಾಡುತ್ತಿರಲಿಲ್ಲ. ಸಂಪಾಜೆಯನ್ನು ಕಲ್ಲುಗುಂಡಿ ಜನರನ್ನು ಹೆಚ್ಚು ಪ್ರೀತಿಸುತ್ತಿದ್ದರು. ಆಧ್ಯಾತ್ಮಿಕ ವಿಚಾರದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದರು. ಶಿಷ್ಯಂದಿರ ಮದುವೆ ಸಮಾರಂಭಕ್ಕೆ ತಪ್ಪದೇ ಹಾಜರಾಗುತ್ತಿದ್ದರು. ನಿವೃತ್ತಿಯ ನಂತರವೂ ಅದೇ ಒಡನಾಟ ಹೊಂದಿದ್ದರು ಎಂದು ನೆನಪಿಸಿಕೊಂಡರು.
ಈ ಬಗ್ಗೆ ಮಾತನಾಡಿದ ಮುರುಳ್ಯದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ಶಶಿಕಲಾ ಟೀಚರ್, ಮಾನವೀಯ ಗುಣಗಳುಳ್ಳ ಗುಣ ಯಶೋಧ ಅವರದ್ದು, ಬಡ ಬಗ್ಗರ ಬಗ್ಗೆ ತುಂಬಾ ಕಾಳಜಿ, ಪರಿಚಯದವರನ್ನು ಎಲ್ಲಿದ್ದರೂ ಮಾತನಾಡಿಸುತ್ತಿದ್ದರು ಎಂದು ನೆನಪಿಸಿಕೊಂಡರು.
ವಿವಿಧ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಯಶೋಧ ಬಡ್ತಿ ಹೊಂದಿ ಕರ್ವೇಲ್ ಶಾಲೆಯಲ್ಲಿ ಮುಖ್ಯೋಪಾಧ್ಯಾಯ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು. ಮೃತರು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ನಿವೃತ್ತ ಅಧಿಕಾರಿ ಪತಿ ಡಿ.ಚಂದಪ್ಪ ಪೂಜಾರಿ,ಪುತ್ರರಾದ ಮಂಗಳೂರು ನವಬಂದರ್ ಮಂಡಳಿಯಲ್ಲಿ ಸಹಾಯಕ ಅಭ್ಯಂತರರಾಗಿ ಸೇವೆ ಸಲ್ಲಿಸುತ್ತಿರುವ ಧನಂಜಯ ಕೆ.ಸಿ., ಬೆಂಗಳೂರಿನಲ್ಲಿ ವೈದ್ಯರಾಗಿರುವ ಡಾ.ಅನಿಲ್ ಕುಮಾರ್ ಕೆ.ಸಿ.,ಬೆಂಗಳೂರಿನಲ್ಲಿ ಮೆಕ್ಯಾನಿಕ್ ಇಂಜಿನಿಯರ್ ಆಗಿರುವ ಭರತೇಶ್ ಕೆ.ಸಿ ಮತ್ತು ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಮನೆಗೆ ಹಲವಾರು ಮಂದಿ ಗಣ್ಯರು ಭೇಟಿ ನೀಡಿ ಸಂತಾಪ ವ್ಯಕ್ತಪಡಿಸಿದ್ದಾರೆ.