ನ್ಯೂಸ್ ನಾಟೌಟ್: ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರ ಮೋಜು ಮಸ್ತಿಗೆ ಕಡಿವಾಣ ಹಾಕುವುದಕ್ಕೆ ಪೊಲೀಸರು ಮುಂದಾಗಿದ್ದಾರೆ.
ರಸ್ತೆಯ ಬದಿಗಳಲ್ಲಿ ವಾಹನ ನಿಲ್ಲಿಸಿ ಹರಿಯುವ ನೀರಿನಲ್ಲಿ ಆಟ ಆಡುವುದು, ಬಂಡೆ ಕಲ್ಲುಗಳನ್ನು ಏರುವುದು, ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದಕ್ಕೆ ಹಲವಾರು ಮಂದಿ ಪ್ರಯತ್ನಿಸುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಕಠಿಣ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ಇದೀಗ ಮೂಡಿಗೆರೆಯ ಚಾರ್ಮಾಡಿ ಬಳಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಜಲಪಾತಗಳ ಬಳಿ ರಸ್ತೆ ಮಧ್ಯೆ ಗಾಡಿ ನಿಲ್ಲಿಸಿ ಪ್ರವಾಸಿಗರು ಮೋಜು ಮಸ್ತಿ ಮಾಡುತ್ತಿರುವ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಸಾರ್ವಜನಿಕ ವಾಹನಗಳಿಗೆ ತೊಂದರೆ ಕೊಡುವವರನ್ನು ನಿಯಂತ್ರಿಸುವುದಕ್ಕಾಗಿ ಜಲಪಾತಗಳ ಬಳಿ ಹೈವೆ ಪ್ಯಾಟ್ರೋಲ್ ಪೊಲೀಸರ ನಿಯೋಜನೆ ಮಾಡಲಾಗಿದೆ. ಜಾರುವ ಬಂಡೆಗಳ ಏರುವ ಸಾಹಸ ಮಾಡುವವರ, ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ನಿಲ್ಲಿಸಿ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸುವುದಕ್ಕೆ ನಿಲ್ಲುವ ವಾಹನ ಚಾಲಕರ ಮೇಲೆ ಬಿಗಿ ಕ್ರಮವನ್ನು ತೆಗೆದುಕೊಳ್ಳುವುದಕ್ಕೆ ನಿರ್ಧರಿಸಲಾಗಿದೆ. ಇಡೀ ದಿನ ಸ್ಥಳದಲ್ಲೇ ಮೊಕ್ಕಾಂ ಹೂಡಲಿರುವ ಪೊಲೀಸರು ನಿರ್ಧಾರಕ್ಕೆ ಈಗ ಶ್ಲಾಘನೆ ವ್ಯಕ್ತವಾಗಿದೆ.