ನ್ಯೂಸ್ ನಾಟೌಟ್: ದಲಿತ ವ್ಯಕ್ತಿಯ ಮುಖ ಮತ್ತು ದೇಹಕ್ಕೆ ಮನುಷ್ಯನ ಮಲವನ್ನು ಬಳಿದ ಘಟನೆ ಮಧ್ಯಪ್ರದೇಶದಲ್ಲಿ ವರದಿಯಾಗಿದೆ. ಈ ಘಟನೆ ಸಂಬಂಧ ಛತಾರ್ಪುರದಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ವ್ಯಕ್ತಿಯು ಗ್ರೀಸ್ ಮೆತ್ತಿದ ಕೈಯಿಂದ ಆರೋಪಿಯನ್ನು ಸ್ಪರ್ಶಿಸಿದ್ದೇ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ಮಧ್ಯಪ್ರದೇಶದಲ್ಲಿ ಇಂತಹ ಅಮಾನವೀಯ ಘಟನೆಗಳು ಸಾಲು ಸಾಲಾಗಿ ವರದಿಯಾಗುತ್ತಿದ್ದು, ಕೆಲವು ದಿನಗಳ ಹಿಂದಷ್ಟೇ ಸಿಧಿ ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯದ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದು, ದೇಶಾದ್ಯಂತ ಆಕ್ರೋಶಕ್ಕೆ ಗುರಿಯಾಗಿತ್ತು ಮತ್ತು ಅಲ್ಲಿನ ಮುಖ್ಯಮಂತ್ರಿಯೇ ಆತನ ಕಾಲು ತೊಳೆದು ಕ್ಷಮೆ ಕೇಳಿದ್ದರು ಮತ್ತು ಆರೋಪಿಯ ಮನೆ ಕೆಡವಲಾಗಿತ್ತು. ಈಗ ಅಂತಹದ್ದೆ ಮತ್ತೊಂದು ಘಟನೆ ಅಲ್ಲಿ ವರದಿಯಾಗಿದೆ.
ಈ ಘಟನೆಯಲ್ಲಿ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸೇರಿದ ಆರೋಪಿ ರಾಮಕೃಪಾಲ್ ಪಟೇಲ್ನನ್ನು ಬಂಧಿಸಲಾಗಿದೆ. ಪಟೇಲ್ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ಸೆಕ್ಷನ್ಗಳ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಛತಾರ್ಪುರ ಜಿಲ್ಲಾ ಕೇಂದ್ರದಿಂದ ಸುಮಾರು 35 ಕಿಮೀ ದೂರದಲ್ಲಿ ಇರುವ ಬಿಕೌರಾ ಗ್ರಾಮದಲ್ಲಿ ಚರಂಡಿಯೊಂದರ ನಿರ್ಮಾಣ ಕೆಲಸದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ ಎಂದು ಸಂತ್ರಸ್ತ ದಶರಥ್ ಅಹಿರ್ವಾರ್, ಶನಿವಾರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಆರೋಪಿಯು ಸಮೀಪದ ಹ್ಯಾಂಡ್ ಪಂಪ್ ಬಳಿ ಸ್ನಾನ ಮಾಡುತ್ತಿದ್ದ. ಚರಂಡಿ ನಿರ್ಮಾಣ ಕಾರ್ಯಕ್ಕೆ ಬಳಸುತ್ತಿದ್ದ ಗ್ರೀಸ್ ಮೆತ್ತಿದ್ದ ಕೈಯನ್ನು ಸಂತ್ರಸ್ತ ಆಕಸ್ಮಿಕವಾಗಿ ಆರೋಪಿ ಪಟೇಲ್ಗೆ ಮುಟ್ಟಿಸಿದ್ದಾಗಿ ಅಹಿರ್ವಾರ್ ತಿಳಿಸಿದ್ದಾರೆ.
“ಇದರ ಬಳಿಕ ರಾಮಕೃಪಾಲ್ ಪಟೇಲ್, ತಾನು ಸ್ನಾನ ಮಾಡಲು ಬಳಸುತ್ತಿದ್ದ ಮಗ್ನಲ್ಲಿ ಮನುಷ್ಯನ ಮಲವನ್ನು ತಂದು ನನ್ನ ದೇಹ, ತಲೆ ಹಾಗೂ ಮುಖಕ್ಕೆ ಬಳಿದಿದ್ದಾನೆ. ಇಷ್ಟಲ್ಲದೆ ನನ್ನ ಜಾತಿ ಪ್ರಸ್ತಾಪಿಸಿ ಅವಮಾನಕರವಾಗಿ ನಿಂದಿಸಿದ್ದಾನೆ” ಎಂದು ಸಂತ್ರಸ್ತ ದೂರಿನಲ್ಲಿ ತಿಳಿಸಿದ್ದಾರೆ. “ನಾನು ಈ ವಿಚಾರವನ್ನು ಪಂಚಾಯತಿ ಮುಂದೆ ಪ್ರಸ್ತಾಪಿಸಿದ್ದೆ. ಸಭೆಯನ್ನೂ ಕರೆದಿದ್ದೆ. ಆದರೆ ಪಟೇಲ್ ವಿರುದ್ಧ ಕ್ರಮ ಕೈಗೊಳ್ಳುವ ಬದಲು ನನಗೇ 600 ರೂ ದಂಡ ವಿಧಿಸಿದ್ದರು” ಎಂದು ಆರೋಪಿಸಿದ್ದಾರೆ.
“ರಾಮಕೃಪಾಲ್ ಪಟೇಲ್ ವಿರುದ್ಧ ಐಪಿಸಿ ಸೆಕ್ಷನ್ 294, 506 ಹಾಗೂ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ” ಎಂದು ಪೊಲೀಸ್ ಉಪ ವಿಭಾಗೀಯ ಅಧಿಕಾರಿ (ಎಸ್ಡಿಒಪಿ) ಮನಮೋಹನ್ ಸಿಂಗ್ ಬಾಘೇಲ್ ತಿಳಿಸಿದ್ದಾರೆ.