ನ್ಯೂಸ್ ನಾಟೌಟ್ :ಪ್ರೀತಿ ಅಂದ್ರೆನೇ ಹಾಗೆ.ಪ್ರೀತಿಸಿದವರಿಗಾಗಿ ಯಾವ ತ್ಯಾಗಕ್ಕೂ ಸಿದ್ಧ ಅನ್ನುವವರು ಅನೇಕರಿದ್ದಾರೆ. ಅಂತೆಯೇ ಇಲ್ಲೊಬ್ಬ ಯುವಕ ಪ್ರೀತಿ ಬಲೆಗೆ ಬಿದ್ದು ಲಕ್ಷಾಂತರ ರೂ. ಹಣ ಖರ್ಚು ಮಾಡಿ ಕೊನೆಗೆ ಅತ್ತ ಹಣವೂ ಇಲ್ಲದೇ , ಇತ್ತ ಪ್ರೀತಿಯೂ ಇಲ್ಲದೇ ಸಾವನ್ನಪ್ಪಿದ ದಾರುಣ ಘಟನೆ ವರದಿಯಾಗಿದೆ.
ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಹಾತೂರು ಗ್ರಾಮದ ಸರೋಜ ಎಂಬುವವರ ಮಗ ಅಜಿತ್ ಗಣಪತಿ ಪ್ರೀತಿಯ ಬಲೆಗೆ ಬಿದ್ದು ಸಾವಿಗೀಡಾದ ಯುವಕ .ಈತ 35 ವರ್ಷ ಪ್ರಾಯದ ಒಂದು ಮಗುವಿರುವ ಮಹಿಳೆಯನ್ನು ಪ್ರೀತಿಸಿದ್ದು, 10 ಲಕ್ಷಕ್ಕೂ ಅಧಿಕ ಹಣ ಹಾಗೂ ಚಿನ್ನಾಭರಣಗಳನ್ನು ಕಳೆದುಕೊಂಡಿದ್ದಾನೆ ಎನ್ನಲಾಗಿದೆ.ಒಂದು ದಿನ ಈತ ಬೀದಿ ಹೆಣವಾಗಿ ಹೋಗಿದ್ದ ವೇಳೆ ಆತನ ಜೇಬಿನಲ್ಲಿರುವ ಪತ್ರ ಪ್ರೀತಿ ಕಥೆಯನ್ನು ಹೇಳಿತ್ತು.ಈತ ಯಾಕೆ ಸಾವಿಗೀಡಾದ ಅನ್ನೊದಕ್ಕೆ ಕಾರಣ ಆ ಪತ್ರದ ಮೂಲಕ ಸಿಕ್ಕಿದೆ.
ತಾನು ಹೊತ್ತು ಹೆತ್ತು ಸಾಕಿ ಸಲಹಿದ ತಾಯಿ ಸರೋಜ ಅವರ ಆಕ್ರಂದನ ಇದೀಗ ಮುಗಿಲು ಮುಟ್ಟಿದೆ.ತಾನೂ ಆಯಿತು , ತನ್ನ ಕೆಲಸವೂ ಆಯಿತು ಎನ್ನುತ್ತಿದ್ದ ಯುವಕನ ಈ ಸಾವು ಕುಟುಂಬವನ್ನು ಶೋಕ ಸಾಗರದಲ್ಲಿ ಮುಳುಗಿಸುವಂತೆ ಮಾಡಿದೆ. ಗೋಣಿಕೊಪ್ಪಲಿನಲ್ಲಿ ಖಾಸಗಿ ಬಸ್ಸಿನ ಚಾಲಕನಾಗಿ ಕೆಲಸ ಮಾಡುತಿದ್ದ ಈತ ಗೋಣಿಕೊಪ್ಪಲಿನಿಂದ ಹುದಿಕೇರಿ, ಬಿರುನಾಣಿ ಮತ್ತು ಶ್ರಿಮಂಗಲ ಮಾರ್ಗದಲ್ಲಿ ನಾಲ್ಕು ವರ್ಷಗಳಿಂದ ಬಸ್ಸು ಓಡಿಸುತ್ತಿದ್ದ ಎಂಬ ಮಾಹಿತಿಯಿದೆ. ಆದರೆ ಅದೇನಾಯ್ತೋ ಏನೋ ಅಜಿತ್ ಗಣಪತಿ ಇದ್ದಕ್ಕಿದ್ದಂತೆ ಒಂದು ದಿನ ರಾತ್ರಿ ಗೋಣಿಕೊಪ್ಪದ ಮಾರುಕಟ್ಟೆ ಬಳಿ ವಿಷ ಸೇವಿಸಿ ಪ್ರಾಣ ಬಿಡುವುದಕ್ಕೆ ಒದ್ದಾಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಅಜಿತ್ ನನ್ನು ಆಸ್ಪತ್ರೆಗೆ ಕರೆದೊಯ್ದರೂ ಆತನನ್ನು ಬದುಕಿಸಲು ಸಾಧ್ಯವಾಗಲಿಲ್ಲ.ಆತನನ್ನು ಹೇಗಾದರೂ ಮಾಡಿ ಬದುಕಿಸಬೇಕು ಎಂಬ ಹಠದಲ್ಲಿದ್ದ ತನ್ನ ಸಹೋದರ ಭರತ್ ಸೋಮಯ್ಯನಿಗೆ ಅಜಿತ್ ಆಡಿದ ಮಾತುಗಳು ಆಘಾತವನ್ನುಂಟು ಮಾಡಿದವು. ನನ್ನನ್ನು ಬದುಕಿಸಬೇಡಿ. ಬದುಕಿಸಿದರೂ ನಾಳೆ ಕಿರಣ್ ಗೌಡ ನನ್ನನ್ನು ಕೊಚ್ಚಿಕೊಲೆ ಮಾಡುತ್ತಾನೆ ಎಂದು ಸಾವಿಗೀಡಾಗುವ ಕೆಲವೇ ಸಮಯದಲ್ಲಿ ಈ ಹೇಳಿಕೆ ನೀಡಿದ್ದಾನೆ. ಅಜಿತ್ ಜೇಬಿನಲ್ಲಿದ್ದ ಡೆತ್ ನೋಟ್ ಓದಿದ ಬಳಿಕ ಅಜಿತ್ ಗಣಪತಿ ಯಾಕೆ ಕಿರಣ್ ಗೌಡ ನನ್ನನ್ನು ಕೊಲ್ಲುತ್ತಾನೆ ಎಂದು ಹೇಳಿದ ಎನ್ನುವುದಕ್ಕೆ ಉತ್ತರ ಸಿಕ್ಕಿತ್ತು. ಅಷ್ಟೇ ಅಲ್ಲ ಅಜಿತ್ ಗಣಪತಿ ತಾನು ಒಬ್ಬಾಕೆಯನ್ನು ಪ್ರೀತಿಸುತ್ತಿದ್ದ ವಿಚಾರ ಬಯಲಿಗೆ ಬಂತು.
ಅಜಿತ್ ನಾಲ್ಕು ವರ್ಷಗಳಿಂದ ಬಸ್ಸು ಓಡಿಸುತ್ತಿರುವಾಗ ಪರಿಚಯವಾದವಳೇ ಬಿರುನಾಣಿ ಸಮೀಪದ ಪೂಕೊಳ ಗ್ರಾಮದ ಬಿನ್ಯ ಬೋಜಮ್ಮ. ಆ ಪರಿಚಯ ಪ್ರೀತಿಗೆ ತಿರುಗಿದೆ ಎಂದು ಹೇಳಲಾಗಿದೆ. ಯುವಕ ಈಕೆಯೇ ನನ್ನ ಸರ್ವಸ್ವ ಎಂದು ಹೇಳಿ ದುಡಿದಿದ್ದನ್ನೆಲ್ಲಾ ಆಕೆಗೆ ಕೊಡಲಾರಂಭಿಸಿದ್ದನಂತೆ. ಮನೆಗೆ ಬಂದರೂ ಯಾರೊಂದಿಗೂ ಬೆರೆಯದ ಈತ ತಾನು ದುಡಿದು ಸಂಪಾದಿಸಿದ ಹಣವನ್ನು ಈಕೆಗೆ ಕೊಡೊದಕ್ಕೆ ಶುರು ಮಾಡಿದ್ದ ಎನ್ನಲಾಗುತ್ತಿದೆ.ಅಷ್ಟು ಮಾತ್ರವಲ್ಲದೇ ಬೆಂಗಳೂರಿನಲ್ಲಿದ್ದಾಗ ಖರೀದಿಸಿದ್ದ ಕಾರನ್ನು ಇತ್ತೀಚೆಗೆ ಮಾರಾಟ ಮಾಡಿದ್ದ ಎಂಬ ಮಾಹಿತಿಯೂ ಇದೆ. ಆ ಹಣವನ್ನು ಏನು ಮಾಡಿದ ಎನ್ನುವುದೇ ಗೊತ್ತಾಗಲಿಲ್ಲ ಎನ್ನುತ್ತಾರೆ ಮನೆಯವರು. ಸ್ನೇಹಿತರು ಸಂಬಂಧಿಕರ ಬಳಿಯಲೆಲ್ಲಾ 50 ಸಾವಿರ, ಲಕ್ಷ ಅಂತ ಸಾಲ ಮಾಡಿದ್ದನಂತೆ. ತನ್ನ ಬಳಿ ಇದ್ದ ಸ್ಮಾರ್ಟ್ ಫೋನನ್ನು ಬಿಡದೆ ಮಾರಾಟ ಮಾಡಿದ್ದಾನೆ. ಕೊನೆಗೆ ತನ್ನ ತಾಯಿಯ ಬಳಿ ಇದ್ದ ಕೀ ಪ್ಯಾಡ್ ಫೋನನ್ನು ಬಳಸುವ ಹಂತಕ್ಕೆ ಎಲ್ಲವನ್ನು ಕಳೆದುಕೊಂಡಿದ್ದಾನೆ ಎನ್ನುವ ವಿಚಾರ ಬಯಲಿಗೆ ಬಂದಿದೆ.
ಒಂದೆಡೆ ಎದೆಯೆತ್ತರಕ್ಕೆ ಬೆಳೆದ ಮಗನನ್ನು ಕಳೆದು ಕೊಂಡು ಕಣ್ಣಿರಿಡುತ್ತಿರುವ ತಾಯಿ, ಮತ್ತೊಂದೆಡೆ ಪ್ರೀತಿಸಿದವಳಿಗಾಗಿ ಎಲ್ಲವನ್ನು ಸುರಿದು ನಮ್ಮನ್ನು ಬೀದಿಗೆ ನಿಲ್ಲಿಸಿ ಹೋಗಿದ್ದಾನೆ ಎನ್ನುವ ಕೂಗು ಕಲ್ಲು ಹೃದಯವನ್ನೂ ಕೂಡ ಕರಗಿಸುವಂತೆ ಮಾಡುವಂತಹ ಘಟನೆಯಿದು. ಅಜಿತ್ ಗಣಪತಿ ಬರೆದಿದ್ದ ಡೆತ್ ನೋಟ್ ಮತ್ತು ಗಣಪತಿ ಅವರ ಕುಟುಂಬದವರು ನೀಡಿದ ದೂರನ್ನು ಆಧರಿಸಿ ಗೋಣಿಕೊಪ್ಪ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಹಾಗೂ ಮಹಿಳೆ ಬಿನ್ಯ ಬೋಜಮ್ಮ ಮತ್ತು ಕಿರಣ್ ಗೌಡನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸದ್ಯ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ.ಆದರೆ ಅಜಿತ್ ಗಣಪತಿಗೆ ಯಾರಿಂದ ಮೋಸ ಆಗಿದೆ ಎನ್ನುವ ಸತ್ಯ ಪೊಲೀಸ್ ತನಿಖೆಯಿಂದಷ್ಟೇ ಹೊರ ಬರಬೇಕಿದೆ.