ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತು ಸೇವನೆ ಹಾಗೂ ಕಳ್ಳ ಸಾಗಾಣಿಕೆ ಪ್ರಕರಣಗಳು ಹೆಚ್ಚುತ್ತಿದೆ. ಅದರಲ್ಲೂ ಯುವ ಜನತೆ ಮಾದಕ ವಸ್ತು ಸೇವನೆ ಚಟಕ್ಕೆ ಬಿದ್ದು ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂತಹ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಕೊಡಗು ಜಿಲ್ಲಾ ಪೊಲೀಸರು 6 ತಿಂಗಳಲ್ಲಿ 33 ಪ್ರಕರಣಗಳನ್ನು ದಾಖಲಿಸಿದ್ದಾರೆ. 63 ಮಂದಿಯನ್ನು ಬಂಧಿಸಿದ್ದಾರೆ. ಒಟ್ಟು ₹10.69 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ತನಿಖೆ ವೇಳೆ ಕೊಡಗು ಜಿಲ್ಲೆಯಲ್ಲಿ ಸಿಕ್ಕಿರುವ ಮಾದಕ ವಸ್ತುಗಳಲ್ಲಿ ಅತ್ಯಂತ ದುಬಾರಿ ಬೆಲೆಯ ‘ಎಂಡಿಎಂಎ’ ಸಹ ಸೇರಿಕೊಂಡಿದೆ ಎಂಬ ಅಚ್ಚರಿಯ ಅಂಶವೂ ಬೆಳಕಿಗೆ ಬಂದಿದೆ. ಬೆಂಗಳೂರು, ಮುಂಬೈ, ನವದೆಹಲಿಯಂತಹ ದೊಡ್ಡ ನಗರಗಳಲ್ಲಿ ನಡೆಯುವ ಪಾರ್ಟಿಗಳು, ರೇವ್ ಪಾರ್ಟಿಗಳಲ್ಲಿ ನಿಷೇಧಿತ ಎಂಡಿಎಂಎ ವಸ್ತು ಬಳಕೆಯಾಗಿರುವುದರ ಬಗ್ಗೆ ಕೇಳಿದ್ದೆವು. ಆದರೆ ಕೊಡಗಿನಲ್ಲೂ ಇಂತಹ ಮಾದಕ ವಸ್ತುಗಳನ್ನು ಕದ್ದು ಮುಚ್ಚಿ ಬಳಸುತ್ತಿದ್ದಾರೆ ಅನ್ನುವ ಅಂಶವನ್ನು ಪೊಲೀಸ್ ಅಧಿಕಾರಿಗಳೇ ತಿಳಿಸಿದ್ದಾರೆ.
ಈಗ ಬಂಧಿತರಾಗಿರುವ ಬಹುತೇಕ ಆರೋಪಿಗಳು ತಮಗೆ ಮಾದಕವಸ್ತುಗಳು ಮೈಸೂರಿನಿಂದ ಪೂರೈಕೆಯಾಗುತ್ತಿದೆ ಎಂದು ಹೇಳಿದ್ದಾರೆ. ಇದರ ಜಾಡು ಹಿಡಿದ ಪೊಲೀಸರಿಗೆ ಯಾವುದೇ ಮಾಹಿತಿ ಸಿಗದೆ ವಾಪಸ್ ಬಂದಿದ್ದಾರೆ. ಮೊಬೈಲ್ ಫೋನ್ ಮೂಲಕ ವ್ಯವಹಾರ ನಡೆಸಲಾಗುತ್ತಿದೆ. ಬಾಕ್ಸ್ ರೂಪದಲ್ಲಿ ಪೂರೈಕೆದಾರರು ನೀಡುತ್ತಾರೆ ಅನ್ನುವ ಅಂಶ ತನಿಖೆ ವೇಳೆ ತಿಳಿದು ಬಂದಿದೆ. ಕಳೆದ 6 ತಿಂಗಳಲ್ಲಿ 16 ಕೆ.ಜಿ 958 ಗ್ರಾಂನಷ್ಟು ಗಾಂಜಾ ಹಾಗೂ 75 ಗ್ರಾಂನಷ್ಟು ಎಂಡಿಎಂಎ ಪತ್ತೆಯಾಗಿದೆ. 75 ಗ್ರಾಂ ಎಂಡಿಎಂಎಗೆ ₹ 2.38 ಲಕ್ಷ ಬೆಲೆ ಎಂದು ಪೊಲೀಸರು ಅಂದಾಜಿಸಿದ್ದಾರೆ.