ನ್ಯೂಸ್ ನಾಟೌಟ್: ವಿಶ್ವದ ಜನಪ್ರಿಯ ಸಂದೇಶ ಸಾಧನ ವಾಟ್ಸಾಪ್ ಇತ್ತೀಚಿನ ದಿನಗಳಲ್ಲಿ ನಕಲಿ ಸುದ್ದಿ ಮತ್ತು ವಂಚನೆಗಳಿಗೆ ದಾರಿ ಮಾಡಿಕೊಡುತ್ತಿದೆ. ಪ್ರಪಂಚದ ಜನಪ್ರಿಯ ಅಪ್ಲಿಕೇಶನ್ ಅನ್ನೇ ಬಂಡವಾಳವಾಗಿ ಮಾಡಿಕೊಂಡಿರುವ ವಂಚಕರು ಸುಳ್ಳು ಸುದ್ದಿಯನ್ನು ಹರಡಲು ಮತ್ತು ಬಳಕೆದಾರರನ್ನು ವಂಚಿಸಲು ಇದರ ಜನಪ್ರಿಯತೆಯ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ.
ಪ್ರಸ್ತುತ, ವಾಟ್ಸಾಪ್ನಲ್ಲಿ ಹೊಸ ಸಂದೇಶವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಅದರಲ್ಲಿ “ಪಿಂಕ್ ವಾಟ್ಸಾಪ್” ಡೌನ್ಲೋಡ್ ಮಾಡಲು ಲಿಂಕ್ ಕಳುಹಿಸಲಾಗುತ್ತಿದೆ. ಇದರಲ್ಲಿ ಹೊಸ ವೈಶಿಷ್ಟ್ಯಗಳೊಂದಿಗೆ ವಾಟ್ಸಾಪ್ನ ಹೊಸ ಲುಕ್ ಆನಂದಿಸಲು ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಲು ಕೇಳಲಾಗುತ್ತಿದೆ. ಪಿಂಕ್ ವಾಟ್ಸಾಪ್ ಕ್ರೇಜ್ ನಿಂದಾಗಿ ನೀವೇನಾದರೂ ಈ ಲಿಂಕ್ ಡೌನ್ಲೋಡ್ ಮಾಡಿದರೆ ಸಂಕಷ್ಟಕ್ಕೆ ಸಿಲುಕಬಹುದು ಎಚ್ಚರ! ಈ ಬಗ್ಗೆ ಮುಂಬೈ ಪೊಲೀಸರು ಎಚ್ಚರಿಕೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.
ಹೌದು, ಪಿಂಕ್ ವಾಟ್ಸಪ್ ಬಗ್ಗೆ ಎಚ್ಚರಿಕೆ ನೀಡುರುವ ಮುಂಬೈ ಪೊಲೀಸರು ಇದೊಂದು ವೈರಸ್. ಇದು ಪಿಂಕ್ ವಾಟ್ಸಾಪ್ ಸ್ಕ್ಯಾಮ್ ಆಗಿದೆ. ಪ್ಲಾಟ್ಫಾರ್ಮ್ಗೆ ಲಿಂಕ್ ಮಾಡಲಾದ ಈ ಹೊಸ ವಂಚನೆಯ ಬಗ್ಗೆ ಅಧಿಕಾರಿಗಳು ಜನರಿಗೆ ಎಚ್ಚರಿಕೆ ನೀಡಿದ್ದಾರೆ. ವಾಟ್ಸಾಪ್ ಬಳಕೆದಾರರು ಯಾವುದೇ ಕಾರಣಕ್ಕೂ ಇಂತಹ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ ಅಥವಾ ಅಪ್ಲಿಕೇಶನ್ ಡೌನ್ಲೋಡ್ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ.
ಇದು ಉದ್ದೇಶಪೂರ್ವಕವಾಗಿ ನವೀಕರಣವನ್ನು ಪರಿಚಯಿಸುತ್ತದೆ ಮತ್ತು ಬಳಕೆದಾರರಿಗೆ ಪಿಂಕ್ ವಾಟ್ಸಾಪ್ ಆಸೆ ತೋರಿಸುವ ಮೂಲಕ ಹೊಸ ವೈಶಿಷ್ಟ್ಯಗಳ ಭರವಸೆಯನ್ನು ನೀಡುತ್ತದೆ. ಆದರೆ, ಈ ಲಿಂಕ್ ಅನ್ನು ಕ್ಲಿಕ್ ಮಾಡುವುದರಿಂದ ಬಳಕೆದಾರರ ಫೋನ್ ಮೇಲೆ ಫಿಶಿಂಗ್ ದಾಳಿಗೆ ಕಾರಣವಾಗುತ್ತದೆ ಮತ್ತು ಈ ಲಿಂಕ್ ಕ್ಲಿಕ್ ಮಾಡಿ ಅದನ್ನು ಡೌನ್ಲೋಡ್ ಮಾಡುವುದರಿಂದ ಬಳಕೆದಾರರ ಸೂಕ್ಷ್ಮ ಮಾಹಿತಿ ಕಳವಾಗಬಹುದು, ಸಂಪರ್ಕ ಸಂಖ್ಯೆಗಳು ಮತ್ತು ಉಳಿಸಿದ ಚಿತ್ರಗಳ ಅನಧಿಕೃತವಾಗಿ ಬಳಕೆಯಾಗಬಹುದು, ಬ್ಯಾಂಕ್ ಬಾಲನ್ಸ್ ಖಾಲಿ ಆಗಬಹುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.