ನ್ಯೂಸ್ ನಾಟೌಟ್: ಕಲುಷಿತ ನೀರು ಕುಡಿದು ಅನಾರೋಗ್ಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆಗಳ ಬಗ್ಗೆವರದಿಯಾಗಿದ್ದವು.ಇದೀಗ ಸಿ.ಎಂ. ಸಿದ್ದರಾಮಯ್ಯ ಅವರು ಮಾತನಾಡುತ್ತಾ ‘ಇನ್ಮುಂದೆ ಕಲುಷಿತ ನೀರಿನ ದುರಂತ ಸಂಭವಿಸಿದರೆ ಸಿಇಓ ಸಸ್ಪೆಂಡ್ ‘ಎಂದು ಖಡಕ್ ಸೂಚನೆ ನೀಡಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಕಲುಷಿತ ನೀರಿನ ಅನಾಹುತ ಕುರಿತಂತೆ ಮಾತನಾಡುತ್ತಾ ಇನ್ಮುಂದೆ ಈ ದುರಂತ ಮರು ಕಳಿಸಿದರೆ ನೇರವಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಹೊಣೆ ಮಾಡಿ ಅಮಾನತುಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ವೀಡಿಯೊ ಕಾನ್ಫರೆನ್ಸ್ ನಡೆಸಿದ ವೇಳೆ ಈ ಸೂಚನೆ ನೀಡಿದರು.ಮೊದಲ ಅನಾಹುತ ಸಂಭವಿಸಿದಾಗಲೇ ಎಚ್ಚೆತ್ತುಕೊಳ್ಳಬೇಕಾಗಿತ್ತು.ಆದರೆ ಮತ್ತೆ ಘಟನೆ ಮರುಕಳಿಸಿದೆ. ನೀವು ಏನ್ ಮಾಡ್ತಾ ಇದ್ದೀರಿ? ‘ಜನರ ಜೀವದ ಜತೆ ಚೆಲ್ಲಾಟ ಆಡಬೇಡಿ. ಕಚೇರಿಯಲ್ಲಿ ಕುಳಿತು ಕೆಲಸ ಮಾಡಬಾರದು.ಸ್ಥಳಕ್ಕೆ ಭೇಟಿ ನೀಡಿ ಸಮಗ್ರವಾಗಿ ಅಧ್ಯಯನ ನಡೆಸಿ ಎಂದರು. ಮತ್ತೆ ಕಲುಷಿತ ನೀರಿನ ಅನಾಹುತ ಆದರೆ ನೀವೇ ಹೊಣೆ . ಮುಂದಿನ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೊಪ್ಪಳ ಜಿಲ್ಲೆ ಸೇರಿ ಹಲವು ಕಡೆಗಳಲ್ಲಿ ಕಲುಷಿತ ನೀರು ಕುಡಿದು ಜನರ ಆರೋಗ್ಯ ಮತ್ತು ಜೀವಕ್ಕೆ ಸಮಸ್ಯೆಯಾಗಿರುವ ಹಿನ್ನಲೆಯಲ್ಲಿ ತನಿಖೆ ನಡೆಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದರು. ಸ್ಥಳೀಯವಾಗಿ ತನಿಖೆ ಆರಂಭಗೊಂಡಿದೆ ಹಾಗೂ ಬೆಂಗಳೂರು ಕೇಂದ್ರದಿಂದಲೂ ತಂಡವನ್ನು ಕಳುಹಿಸಿ ತನಿಖೆ ನಡೆಸಲಾಗುವುದು ಎಂದು ಹೇಳಿದರು.ಎರಡು ವರದಿಗಳು ಲಭ್ಯವಾದ ಬಳಿಕ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.