ನ್ಯೂಸ್ ನಾಟೌಟ್:ಚಾರ್ಮಾಡಿ ಘಾಟಿಯ ಏಳನೇ ತಿರುವಿನಲ್ಲಿ ಬುಧವಾರ ಸಂಜೆ ಒಂಟಿ ಸಲಗ ರಸ್ತೆ ಬದಿಯಲ್ಲಿ ನಿಂತು ವಾಹನ ಸವಾರರಿಗೆ ಭಯ ಸೃಷ್ಟಿ ಮಾಡಿದೆ. ಸಂಜೆ ಮಂಗಳೂರು- ಹಾಸನ ಸರಕಾರಿ ಬಸ್ ಕೂದಲೆಳೆ ಅಂತರದಲ್ಲಿ ಕಾಡಾನೆಯ ದಾಳಿಯಿಂದ ಪಾರಾಗಿದೆ.
ಟ್ರಾಫಿಕ್ ಜಾಮ್:
ಕಾಡಾನೆ ಕಂಡು ಸ್ವಲ್ಪ ದೂರದಲ್ಲಿ ಚಾಲಕ ಬಸ್ ನಿಲ್ಲಿಸಿದ್ದು,ರಸ್ತೆ ಬದಿ ಮರದ ಹತ್ತಿರ ನಿಂತಿದ್ದ ಕಾಡಾನೆ ಸ್ವಲ್ಪ ಸಮಯದ ಬಳಿಕ ಏಳನೇ ತಿರುವಿನ ಮತ್ತೊಂದು ಭಾಗದಲ್ಲಿ ಹೋಗಿ ನಿಂತಿದೆ.
ಬಸ್ ನ ಹಿಂದೆ ಹಲವು ವಾಹನಗಳು ಅರ್ಧ ಗಂಟೆಗೂ ಅಧಿಕ ಕಾಲ ಸಾಲುಗಟ್ಟಿ ನಿಂತಿದ್ದು ಒಂದೊಂದೇ ವಾಹನಗಳು ನಿಧಾನವಾಗಿ ಚಲಿಸಿದವು. ಈ ವೇಳೆ ಸಲಗ ರಸ್ತೆಯ ಇನ್ನೊಂದು ಬದಿಯ ಸ್ವಲ್ಪ ದೂರದಲ್ಲಿ ನಿಂತಿದ್ದು,ಎರಡು ಬದಿಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಯಿತು.
ಆನೆ ಕಂಡು ಬಂದಿರುವ ವಿಚಾರ ತಿಳಿದ ಕೂಡಲೇ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ
ಪಾಂಡುರಂಗ ಕಮತಿ, ರಾಜಾರಾಮ್ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕಾಡಾನೆ ಕಂಡು ಬಂದಿರಲಿಲ್ಲ.ಆದರೆ ಪರಿಸರದಲ್ಲಿ ತಿರುಗಾಟ ನಡೆಸಿರುವ ಕುರುಹುಗಳು ಕಂಡುಬಂದಿವೆ ಎಂದು ತಿಳಿದು ಬಂದಿದೆ.
ಕಳೆದ ಮೂರು ವಾರಗಳಲ್ಲಿ ಚಾರ್ಮಾಡಿ ಘಾಟಿ ಪರಿಸರದಲ್ಲಿ ಬುಧವಾರ ಸೇರಿ ಕಾಡನೆ ನಾಲ್ಕನೇ ಬಾರಿ ಕಂಡು ಬಂದಿದೆ ಎಂಬ ಮಾಹಿತಿಯಿದೆ.ಏ.26ರಂದು ರಾತ್ರಿ 9ಗಂಟೆ ಹೊತ್ತಿಗೆ,ಹಾಗೂ 27ರಂದು ಬೆಳಿಗ್ಗೆ 7ರ ಹೊತ್ತಿಗೆ,ಆ ಬಳಿಕ ಮೇ 9ರಂದು ರಾತ್ರಿ ಎರಡು ಹಾಗೂ ಮೂರನೇ ತಿರುವಿನ ಮಧ್ಯೆ ಒಂಟಿ ಸಲಗ ಕಂಡು ಬಂದಿತ್ತು. ಇದೀಗ ಮತ್ತೆ ಬುಧವಾರ ಕಾಡಾನೆಯ ದರ್ಶನವಾಗಿದೆ.
ವಾಹನ ಸವಾರರಿಗೆ ಅಪಾಯ:
ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಅಧಿಕ ವಾಹನ ಸಂಚಾರ ಇದೆ.ಸಂಪೂರ್ಣ ಅರಣ್ಯ ಪ್ರದೇಶ ವಾಗಿರುವ ಇಲ್ಲಿ ಮೊಬೈಲ್ ನೆಟ್ ವರ್ಕ್ ಸಹಿತ ಯಾವುದೇ ಸೌಲಭ್ಯಗಳಿಲ್ಲ.ಇಂತಹ ಕಡೆ ಆಗಾಗ ಸಲಗ ಕಂಡು ಬರುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ.ಇಲ್ಲಿ ಸಾಕಷ್ಟು ದ್ವಿ-ಚಕ್ರ ತ್ರಿ-ಚಕ್ರ ವಾಹನಗಳು ಸಂಚರಿಸುತ್ತವೆ.ವಾಹನ ಸವಾರರು ಅತಿ ಹೆಚ್ಚಿನ ಮುನ್ನೆಚ್ಚರಿಕೆ ಜತೆ ಸಂಚಾರ ನಡೆಸುವುದು ಅಗತ್ಯವಾಗಿದೆ.ಈ ಹಿಂದೆ ಘಾಟಿ ಪ್ರದೇಶದಲ್ಲಿ ವಿರಳವಾಗಿ ಕಂಡು ಬರುತ್ತಿದ್ದ ಕಾಡಾನೆ ಇತ್ತೀಚಿನ ದಿನಗಳಲ್ಲಿ ಆಗಾಗ ಕಂಡು ಬರುತ್ತಿದ್ದು, ರಸ್ತೆಯಲ್ಲೇ ಠಿಕಾಣಿ ಹೂಡುತ್ತಿದ್ದು ಭಯದ ವಾತಾವರಣ ಎದುರಾಗಿದೆ.