ನ್ಯೂಸ್ ನಾಟೌಟ್ : ಪುಟ್ಟ ಮಕ್ಕಳ ಮೇಲೆ ಒಂದು ಕಣ್ಣಿಟ್ಟಿರಬೇಕು ಎನ್ನುವುದಕ್ಕೆ ಇಲ್ಲೊಂದು ವಿಡಿಯೋ ಸಾಕ್ಷಿ ಹೇಳುತ್ತದೆ.ಕಣ್ಣು ಮುಚ್ಚುವುದರೊಳಗೆ ಮಕ್ಕಳು ಕೆಲವೊಮ್ಮೆ ಏನೆಲ್ಲಾ ಅವಾಂತರವನ್ನು ಮಾಡುತ್ತಿರುತ್ತಾರೆ.ಟೆರೆಸ್ ಮೇಲೆ ಆಟ ಆಡುತ್ತಾ ಮುಗ್ಧ ಮಕ್ಕಳು ಕೆಳಕ್ಕೆ ಬಿದ್ದು ಬಲಿಯಾಗಿರುವುದರ ಸುದ್ದಿಗಳನ್ನು ನೋಡಿದ್ದೇವೆ.ಆದರೆ ಇಲ್ಲೊಂದು ಮಗು ಪವಾಡ ಸದೃಶ ಪಾರಾದ ವಿಡಿಯೋ ಬಾರಿ ವೈರಲ್ ಆಗಿದೆ.
ಪುಟ್ಟ ಮಗುವೊಂದು 30 ಅಡಿ ಎತ್ತರದಿಂದ ಬೈಕ್ಮೇಲೆ ಬಿದ್ದು, ನೆಲಕ್ಕೆ ಬಿದ್ದಿದೆ. ಹಾಗೆ ಬಿದ್ದ ಮಗು ಸ್ವಲ್ಪವೂ ಗಾಯಗೊಳ್ಳದೆ, ಅದರ ಪಾಡಿಗೆ ಅದೇ ಎದ್ದು ನಿಂತಿದೆ. ಈ ವಿಡಿಯೊ ವೈರಲ್ ಆಗುತ್ತಿದ್ದು, ನೆಟ್ಟಿಗರು ಹುಬ್ಬೇರಿಸಿದ್ದಾರೆ. ಮಗು ಬದುಕಿದ್ದು, ಸ್ವಲ್ಪವೂ ಗಾಯಗೊಳ್ಳದೆ ಅದು ಇಷ್ಟು ಆರಾಮಾಗಿ ಎದ್ದುನಿಂತಿದ್ದು ಒಂದು ಪವಾಡವೇ ಸರಿ ಎನ್ನುತ್ತಿದ್ದಾರೆ.
ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ ರಿಸೋಡೆ ಎಂಬ ಪಟ್ಟಣದಲ್ಲಿರುವ ಮಹಾನಂದ ಕಾಲೋನಿಯಲ್ಲಿ ನಡೆದ ಘಟನೆ ಇದಾಗಿದೆ. ಸಿಸಿಟಿವಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ.ಆ ಹೆಣ್ಣು ಮಗು 30 ಅಡಿ ಎತ್ತರದಿಂದ ನೇರವಾಗಿ ಸಿಮೆಂಟ್ ನೆಲಕ್ಕೆ ಬಿದ್ದಿದ್ದರೆ ಬದುಕುಳಿಯುವುದು ಕಷ್ಟವೇ ಆಗಿತ್ತು. ಅದಿಲ್ಲದೆ ಇದ್ದರೆ ತೀವ್ರ ಸ್ವರೂಪದ ಗಾಯವಂತೂ ಆಗುತ್ತಿತ್ತು. ಆದರೆ ಅದು ಬೈಕ್ನ ಸೀಟ್ ಮೇಲೆ ಬಿದ್ದು, ನಂತರ ನೆಲಕ್ಕೆ ಉರುಳಿದೆ. ಬೈಕ್ ಸೀಟ್ ಸ್ವಲ್ಪ ಮೆತ್ತಗೆ ಇದ್ದ ಪರಿಣಾಮ ಮಗುವಿಗೆ ಏಟಾಗಲಿಲ್ಲ. ಅಲ್ಲಿಂದ ನೆಲ ಕಡಿಮೆ ಅಂತರದಲ್ಲಿ ಇರುವುದರಿಂದ ಅಪಾಯದಿಂದ ಬಾಲಕಿ ಪಾರಾಗಿದ್ದಾಳೆ.
ಮಹಡಿ ಮೇಲೆ ಮನೆಯಿರುವವರು ತುಸು ಎಚ್ಚರಿಕೆಯಿಂದ ಇರುವುದು ತುಂಬಾನೇ ಮುಖ್ಯ.ಮಕ್ಕಳು ಹೊರಗೆ ಬಂದರೂ ಒಂದು ಕಣ್ಣು ಮಕ್ಕಳ ಮೇಲಿಟ್ಟಿರಲೇ ಬೇಕಾಗುತ್ತದೆ.ಮುಗ್ಧ ಮಕ್ಕಳು, ಆಟ ಆಡುವ ವಯಸ್ಸು.ಆದರೆ ಅವರು ತಿಳಿಯದೇ ಏನಾದರೂ ತಪ್ಪುಗಳನ್ನು ಮಾಡಿದರೂ ತಿದ್ದಿ ಬುದ್ದಿವಾದ ಹೇಳುವುದು ಪೋಷಕರ ಜವಾಬ್ದಾರಿಯಾಗಿದೆ.ಪುಟ್ಟ ಕಂದಮ್ಮ 30 ಅಡಿ ಎತ್ತರದಿಂದ ಬಿದ್ದಿರುವುದಕ್ಕೆ ಪೋಷಕರ ಬೇಜವಾಬ್ದಾರಿ ಅಂತಲೇ ಹೇಳಬಹುದು.