ನ್ಯೂಸ್ ನಾಟೌಟ್ : ಇದೀಗ ಬೇಸಿಗೆ ಸಮಯವಾದ್ದರಿಂದ ಅಲ್ಲಲ್ಲಿ ಅಗ್ನಿ ದುರಂತಗಳಾಗುತ್ತಿರುವುದನ್ನು ನಾವು ದಿನ ನಿತ್ಯ ವರದಿಗಳನ್ನು ಕೇಳುತ್ತಿದ್ದೇವೆ.ಇದರಲ್ಲಿ ಆಕಸ್ಮಿಕ ಹಾಗೂ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಗ್ನಿಅವಘಢಗಳಾಗುತ್ತಿರುವುದೇ ಹೆಚ್ಚು. ಈ ರೀತಿಯ ದುರ್ಘಟನೆ ಸಂಭವಿಸುತ್ತಿದ್ದಂತೆ ಕೂಡಲೇ ಎಚ್ಚೆತ್ತುಕೊಂಡರೆ ಅಪಾರ ನಷ್ಟವುಂಟಾಗುವುದನ್ನು ನಾವು ತಪ್ಪಿಸಿಕೊಳ್ಳಬಹುದು.ಹೌದು, ಇದಕ್ಕಾಗಿಯೇ ಸದಾ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿರುವ ಗುತ್ತಿಗಾರಿನ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಇದೀಗ ವಿನೂತನ ಯೋಜನೆ ಮೂಲಕ ಒಂದು ಹೆಜ್ಜೆ ಮುಂದೆ ಇರಿಸಿದೆ.
ಗ್ರಾಮೀಣ ಪ್ರದೇಶದಲ್ಲಿ ಕಟ್ಟಡ ಸೇರಿದಂತೆ ತುರ್ತು ಅಗ್ನಿ ದುರಂತಗಳಾದ ಸಂದರ್ಭದಲ್ಲಿ, ಸಹಕಾರಕ್ಕಾಗಿ ಸಂಪರ್ಕ ಮಾಡಿದರೆ ತಕ್ಷಣವೇ ಸ್ಥಳಕ್ಕೆ ಧಾವಿಸಿ ಕಿಟ್ಟ್ ಮೂಲಕ ಬೆಂಕಿ ನಂದಿಸುವ ಯೋಜನೆ ಇದಾಗಿದೆ.ಈ ಮಹತ್ವದ ಯೋಜನೆಯಾದ ‘ಅಗ್ನಿ ರಕ್ಷಕ ಸೇವೆ’ಯನ್ನು ಏ.23ರಂದು ಲೋಕಾರ್ಪಣೆ ಮಾಡಲಾಯಿತು.ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ,ಅಭ್ಯಾಗತರು ಹಾಗೂ ಯೋಗ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಪ್ರಾತ್ಯಕ್ಷತೆ ನೀಡುವ ಮೂಲಕ ಲೋಕಾರ್ಪಣೆಗೊಳಿಸಲಾಯಿತು.
ಈ ವೇಳೆ ಶ್ರೀ ಶಂಕಪಾಲ ಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷ ಬೆಳ್ಯಪ್ಪ ಗೌಡ ಕಡ್ತಲ್ಕಜೆ, ಗುತ್ತಿಗಾರು ಪಿ.ಎ.ಸಿ. ಬ್ಯಾಂಕ್ ಮಾಜಿ ಅಧ್ಯಕ್ಷ ಭರತ್ ಮುಂಡೋಡಿ, ಅರಣ್ಯ ಇಲಾಖೆ ಸಿಬ್ಬಂದಿ ಧನಂಜಯ ಕುಕ್ಕುಡೇಲು , ಕಾರ್ತಿಕ್ ದೇವ, ಗುತ್ತಿಗಾರು ಚರ್ಚ್ ಧರ್ಮ ಗುರು ಆದರ್ಶ ಪುದಿತಿಯೇತ್, ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ,ಉಪಾಧ್ಯಕ್ಷ ಮೋಹನ್ ದಾಸ್ ಶಿರಾಜೆ, ಪ್ರಧಾನ ಕಾರ್ಯದರ್ಶಿ ಯತೀಂದ್ರ ಕಟ್ಟೆಕೋಡಿ, ಯೋಗ ಶಿಕ್ಷಣ ಶಿಕ್ಷಕ ಶರತ್ ಮರ್ಗಿಲಡ್ಕ, ನಿವೃತ್ತ ಸೈನಿಕ ಮಹೇಶ್ ಕೊಪ್ಪತಡ್ಕ ಮತ್ತು ಸರ್ವ ಸದಸ್ಯರು ಹಾಗೂ ಯೋಗ ಶಿಬಿರದಲ್ಲಿ ಭಾಗವಸಿದ ಪೋಷಕರು ಮತ್ತು ಪುಟಾಣಿಗಳು ಉಪಸ್ಥಿತರಿದ್ದರು.
ಟ್ರಸ್ಟ್ ವತಿಯಿಂದ ಸಾರ್ವಜನಿಕ ಉಪಯೋಗಕ್ಕಾಗಿ ಫಯರ್ ಕಿಟ್ ಗಳನ್ನು ಖರೀದಿಸಲಾಗಿದ್ದು, ಬೆಂಕಿ ಅವಘಡಗಳು ಘಟಿಸಿದ ಯಾವುದೇ ಸಂದರ್ಭದಲ್ಲಿ ಕೂಡ ಸಾರ್ವಜನಿಕರು ಕರೆ ಮಾಡಿ ಸಹಕಾರ ಬಯಸಿದರೆ ಟ್ರಸ್ಟ್ ವತಿಯಿಂದ ಸ್ಥಳಕ್ಕೆ ಪರಿಕರಗಳನ್ನ ತಲುಪಿಸಿ ಬೆಂಕಿ ನಂದಿಸುವ ಉದ್ದೇಶ ಇದಾಗಿರುತ್ತದೆ ಎಂದು ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿಅವರು ತಿಳಿಸಿದ್ದಾರೆ.
“ಅಗ್ನಿ ರಕ್ಷಕ ಸೇವೆ” ವಿನೂತನ ಯೋಜನೆಗೆ ಚಾಲನೆ ನೀಡಿದ ಬಳಿಕ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ (ರಿ) ಗುತ್ತಿಗಾರು ವತಿಯಿಂದ ನಡೆದ ಯೋಗ ತರಬೇತಿ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ಮೆಡಲ್ ಗಳನ್ನು ನೀಡಲಾಯಿತು.
ಇದೇ ಸಂದರ್ಭದಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಇಬ್ಬರು ಯೋಗಪಟುಗಳಾದ ತನ್ವಿ ತಂಟೆಪ್ಪಾಡಿ, ಸಾನ್ವಿ ಪಂಜ ಇವರನ್ನು ಸನ್ಮಾನಿಸಲಾಯಿತು.ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರು ಮತ್ತು ರಾಷ್ಟ್ರಿಯ ಯೋಗ ಪಟುಗಳಿಂದ ಯೋಗ ಪ್ರದರ್ಶನ ಕೂಡ ನಡೆಯಿತು. ಹನಿಕ್ಷಾ. ಎಸ್.ಆರ್. ಮತ್ತು ಹವೀಕ್ಷ. ಎಸ್. ಆರ್. ಪ್ರಾರ್ಥಿಸಿದರು.