ನ್ಯೂಸ್ ನಾಟೌಟ್ : ಉತ್ತರ ಪ್ರದೇಶದ ನೋಯ್ಡಾದಿಂದ ನಡೆಸಲಾಗುತ್ತಿರುವ ‘ಬೈಕ್ ಬಾಟ್’ (ಬೈಕ್ ಟ್ಯಾಕ್ಸಿ) ಎಂಬ ಹಗರಣವು ಸುಮಾರು 15,000 ಕೋಟಿ ರೂ. ಮೌಲ್ಯದ್ದಾಗಿತ್ತು. ಹಗರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬಳಾದ ಮಾಜಿ ಪ್ರಾಂಶುಪಾಲೆ ದೀಪ್ತಿ ಬಹಲ್, ಈ ಹಗರಣ ಬೆಳಕಿಗೆ ಬಂದಾಗಿನಿಂದ ತಲೆಮರೆಸಿಕೊಂಡಿದ್ದು, ಇದೀಗ ಆಕೆಯನ್ನು ’ಮೋಸ್ಟ್ ವಾಂಟೆಡ್ ಕ್ರಿಮಿನಲ್’ಎಂದು ಉತ್ತರ ಪ್ರದೇಶದ ಆರ್ಥಿಕ ಅಪರಾಧ ವಿಭಾಗ ಪೊಲೀಸರು ಘೋಷಿಸಿದ್ದಾರೆ ಎಂದು ವರದಿ ತಿಳಿಸಿದೆ.
ಲೋನಿಯಲ್ಲಿ ವಾಸವಿದ್ದ ದೀಪ್ತಿ, ಆಕೆಯ ಪತಿ ಸಂಜಯ್ ಭಾಟಿ ಮತ್ತು ಕುಟಂಬ ಸದಸ್ಯರು ಗರ್ವಿತ್ ಇನ್ನೊವೇಟಿವ್ ಪ್ರಮೋಟರ್ಸ್ ಲಿಮಿಟೆಡ್ ಎಂಬ ಕಂಪೆನಿಯನ್ನು 2010ರ ಆಗಸ್ಟ್ 20ರಂದು ಆರಂಭಿಸಿದ್ದರು. ಈ ಕಂಪೆನಿ ಗ್ರೇಟರ್ ನೋಯ್ಡಾದಿಂದ ಕಾರ್ಯ ನಿರ್ವಹಿಸುತ್ತಿತ್ತು ಹಾಗೂ ಬೈಕ್ಬಾಟ್ನ ಪ್ರವರ್ತಕ ಕಂಪೆನಿಯೂ ಆಗಿತ್ತು ಎನ್ನಲಾಗಿದೆ.
2017ರಲ್ಲಿ ಭಾಟಿ ಬೈಕ್ ಬಾಟ್ (ಬೈಕ್ ಟ್ಯಾಕ್ಸಿ) ಯೋಜನೆ ಆರಂಭಿಸಿದ್ದು, ದೀಪ್ತಿ ಇದರ ಹೆಚ್ಚುವರಿ ನಿರ್ದೇಶಕಿಯಾಗಿದ್ದಳು. ಆದರೆ 2017ರಲ್ಲೇ ಆಕೆ ಈ ಹುದ್ದೆಗೆ ರಾಜೀನಾಮೆ ನೀಡಿದ್ದಾಗಿ ಆಕೆಯ ವಕೀಲ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದಾರೆ.
ವಿವಾಹಕ್ಕೆ ಮುನ್ನ ದೀಪ್ತಿ ಭಾಗ್ಪತ್ನಲ್ಲಿ ಶಿಕ್ಷಕಿಯಾಗಿದ್ದಳು. ಆದರೆ ಆಕೆ ಕಾಲೇಜಿನಲ್ಲಿ ಇದ್ದ ಬಗ್ಗೆ ಯಾವುದೇ ದಾಖಲೆ ಇಲ್ಲ ಎಂದು ತನಿಖಾಧಿಕಾರಿಗಳ ಹೇಳಿದ್ದಾರೆ. ಅದರೆ ಭರೂತ್ ಕಾಲೇಜ್ ಆಫ್ ಎಜ್ಯುಕೇಶನ್ನ ವೆಬ್ಸೈಟ್ ಪ್ರಕಾರ ದೀಪ್ತಿ ಇಲ್ಲಿನ ಪ್ರಾಚಾರ್ಯೆ. ದೀಪ್ತಿ ಎಂಎ ಪಿಎಚ್ಡಿ ಪದವಿ ಪಡೆದಿರುವುದಾಗಿಯೂ ವಿವರಿಸಲಾಗಿದೆ. ಈ ಕಾಲೇಜು ಚೌಧರಿ ಚರಣ್ಸಿಂಗ್ ವಿವಿಯ ಮಾನ್ಯತೆ ಪಡೆದಿದೆ.
ದೀಪ್ತಿಯ ಸುಳಿವು ನೀಡಿದವರಿಗೆ 50 ಸಾವಿರ ರೂ. ಬಹುಮಾನ ಘೋಷಿಸಲಾಗಿತ್ತು. ಕಳೆದ ವರ್ಷ ಆಕೆಯ ವಿರುದ್ಧದ ಎಲ್ಲ ಪ್ರಕರಣಗಳನ್ನು ಒಂದುಗೂಡಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ದೀಪ್ತಿ ಆ ಬಳಿಕ ದೇಶ ತೊರೆದಿರಬೇಕು ಎಂದು ಶಂಕಿಸಲಾಗಿದೆ. ಪ್ರಸಕ್ತ ದೀಪ್ತಿ ಹಾಗೂ ಮತ್ತೊಬ್ಬ ಅರೋಪಿ ಭುದೇವ್ ಸಿಂಗ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ಸಿದ್ಧತೆ ನಡೆದಿದೆ ಎಂದು ಮೂಲಗಳು ಹೇಳಿವೆ.
ಗ್ರೇಟರ್ ನೋಯ್ಡಾದಲ್ಲಿ ದಾಖಲಾಗಿರುವ 118 ಪ್ರಕರಣಗಳಲ್ಲಿ ಮತ್ತು ದೇಶಾದ್ಯಂತ ದಾಖಲಾಗಿರುವ 150 ಇತರ ಪ್ರಕರಣಗಳಲ್ಲಿ ದೀಪ್ತಿ ಹೆಸರಿದೆ. ಈ ಹಗರಣದಲ್ಲಿ ಶಾಮೀಲಾದ 13 ಮಂದಿ ಹಾಗೂ 13 ಕಂಪೆನಿಗಳ ಹೆಸರು ಆರೋಪ ಪಟ್ಟಿಯಲ್ಲಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಯೋಜನೆಯ ಪ್ರಕಾರ, ಹೂಡಿಕೆದಾರರು ದ್ವಿಚಕ್ರ ವಾಹನ ಟ್ಯಾಕ್ಸಿಯಾಗಿ ಬಳಸಬೇಕಾದ ಮೋಟಾರ್ಸೈಕಲ್ಗೆ ಪಾವತಿಸಬೇಕಾಗಿತ್ತು. ಬದಲಾಗಿ, ಹೂಡಿಕೆದಾರರಿಗೆ ತಮ್ಮ ಹೂಡಿಕೆಯ ಮೇಲೆ ಭಾರಿ ಲಾಭದ ಭರವಸೆ ನೀಡಲಾಯಿತು.
ಪ್ರತಿ ಹೂಡಿಕೆದಾರರಿಗೆ ಒಂದು ಬೈಕ್ಗೆ 62,100 ರೂ. ತಿಂಗಳಿಗೆ 5,175 ರೂ.ಗಳ ಇಎಂಐ ನಿಗದಿಪಡಿಸಲಾಗಿದ್ದು, ಪ್ರತಿ ಬೈಕ್ಗೆ ತಿಂಗಳಿಗೆ 4,590 ರೂ ಬಾಡಿಗೆ ನಿಗದಿಪಡಿಸಲಾಗಿದೆ. ಈ ಯೋಜನೆಯು ಪ್ರತಿ ಬೈಕ್ಗೆ ಶೇಕಡಾ ಐದು ಪ್ರತಿಶತದಷ್ಟು ಮಾಸಿಕ ಬಾಡಿಗೆ ಆದಾಯದ ಬೋನಸ್ ಅನ್ನು ಒಳಗೊಂಡಿತ್ತು, ಜೊತೆಗೆ 10 ಪ್ರತಿಶತದಷ್ಟು ಹೊಂದಾಣಿಕೆಯ ಆದಾಯವನ್ನು ಒಳಗೊಂಡಿದೆ ಎಂದು ವರದಿ ತಿಳಿಸಿದೆ.
ಆದರೆ, ಗ್ರಾಹಕರು ಈ ಯೊಜನೆಯಲ್ಲಿ ಹುಡಿಕೆ ಮಾಡಿದ ಮೇಲೆ ಯಾವುದೇ ಸರಿಯಾದ ದಾಖಲೆಗಳು ಇಲ್ಲದೆ, ಕೇವಲ ಹಣದ ಆಮಿಷ ತೋರಿಸಿ ಹೂಡಿಕೆ ಉಳಿಸಿಕೊಳ್ಳಲಾಯಿತು. ಹೂಡಿಕೆದಾರರ ವಿಶ್ವಾಸವನ್ನು ಗೆಲ್ಲಲು, ಸಂಸ್ಥೆಯು ಹೂಡಿಕೆದಾರರೊಂದಿಗೆ ತಮ್ಮ ಹಣ ಸುರಕ್ಷಿತವಾಗಿದೆ ಮತ್ತು ಅವರ ಹೂಡಿಕೆಯ ಮೇಲಿನ ಆದಾಯವು ಎಲ್ಲಿಯೂ ಹೋಗುವುದಿಲ್ಲ ಎಂಬ ಅಭಿಪ್ರಾಯವನ್ನು ನೀಡುವ ಒಪ್ಪಂದಕ್ಕೆ ಸಹಿ ಹಾಕಿತು.
ಯೋಜನೆಯಲ್ಲಿ ಭಾಗವಹಿಸಿದ ಸುಮಾರು ಎರಡು ಲಕ್ಷ ಹೂಡಿಕೆದಾರರು ಲಾಭಾಂಶ ಮತ್ತು ತಮ್ಮ ಹಣ ಹಿಂತಿರುಗಿಸದಿದ್ದಾಗ ಪೊಲೀಸರನ್ನು ಸಂಪರ್ಕಿಸಿದರು ಮತ್ತು ಅವರು ಭರವಸೆ ನೀಡಿದ ರಿಟರ್ನ್ಸ್ ಅನ್ನು ಸ್ವೀಕರಿಸದಿದ್ದಾಗ ಸಂಸ್ಥೆಯ ವಿರುದ್ಧ ದೂರುಗಳನ್ನು ಸಲ್ಲಿಸಲಾಗಿತ್ತು.