ನ್ಯೂಸ್ ನಾಟೌಟ್ : ನಕಲಿ ಏಷಿಯನ್ ಪೇಂಟ್ಸ್ ತಯಾರಿಸಿ ಮಾರಾಟ ಮಾಡುತ್ತಿದ್ದ ನಕಲಿ ಉದ್ಯಮಿಯನ್ನು ವಿ.ವಿ.ಪುರ ಪೊಲೀಸ್ ಠಾಣೆ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ರಾಜಸ್ತಾನ ಮೂಲದ ಚುನ್ನಿಲಾಲ್ ಬಂಧಿತ ಆರೋಪಿ. 20 ಲಕ್ಷ ರೂ. ಮೌಲ್ಯದ ನಕಲಿ ಏಷಿಯನ್ ಪೇಂಟ್ ಜಪ್ತಿ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ನಕಲಿ ಏಷಿಯನ್ ಪೇಂಟ್ಸ್ ತಯಾರಿಸಲೆಂದೇ ತನ್ನದೇ ಆದ ಚಿಕ್ಕ ಫ್ಯಾಕ್ಟರಿ, ಶೋರೂಂ ತೆರೆದಿರುವುದು ಪತ್ತೆಯಾಗಿದ್ದು, ಈತ ಕಳೆದ 10 ವರ್ಷಗಳಿಂದ ಪ್ರತಿಷ್ಠಿತ ಏಷಿಯನ್ ಪೇಂಟ್ಸ್ ಹೆಸರಿನಲ್ಲಿ ನಕಲಿ ಪೈಂಟ್ಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
ತನ್ನದೇ ಆದಂತಹ ಪೇಂಟ್ ಶೋ ರೂಮ್ ಒಂದನ್ನು ಹೊಂದಿದ್ದ. ಹೀಗಾಗಿ ಪೈಂಟ್ ಬಗ್ಗೆ ಬಹುತೇಕ ಎಲ್ಲ ವಿಚಾರಗಳನ್ನೂ ಅರಿತಿದ್ದ. ಕಳೆದ 10 ವರ್ಷದಲ್ಲಿ ಕೋಟ್ಯಂತರ ರೂ. ಬೆಲೆ ಬಾಳುವ ಏಷಿಯನ್ ಪೇಂಟ್ ಮಾರಾಟ ಮಾಡಿದ್ದ. ಏಷಿಯನ್ ಪೇಂಟ್ ಸ್ಟಿಕ್ಕರ್ ಸೇರಿದಂತೆ ಪೇಂಟ್ ಉತ್ಪನ್ನಗಳನ್ನು ಸಹ ನಕಲು ಮಾಡುತ್ತಿದ್ದ ಎಂದು ವರದಿ ತಿಳಿಸಿದೆ.
ಏಷಿಯನ್ ಪೇಂಟ್ಸ್ ವಿತರಕರಿಗೆ ಇತ್ತೀಚೆಗೆ ಆರೋಪಿಯ ಕಳ್ಳಾಟದ ಸುಳಿವು ಸಿಕ್ಕಿತ್ತು. ಅವರು ಈ ಬಗ್ಗೆ ವಿ.ವಿ.ಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇತ್ತ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಗ್ರಾಹಕರ ಸೋಗಿನಲ್ಲಿ ಹೋಗಿ ಸ್ಯಾಂಪಲ್ ಗಾಗಿ ಒಂದು ಬಾಕ್ಸ್ ಪೇಂಟ್ ಖರೀದಿಸಿ ಪರೀಕ್ಷೆ ಮಾಡಿಸಿದ್ದರು. ಪರೀಕ್ಷೆಯಲ್ಲಿ ನಕಲಿ ಪೇಂಟ್ ಎಂಬುದು ಪತ್ತೆಯಾಗಿತ್ತು. ಕೂಡಲೇ ಪೊಲೀಸರು ಚುನ್ನಿಲಾಲ್ ನನ್ನು ಬಂಧಿಸಿದ್ದಾರೆ.