ನ್ಯೂಸ್ ನಾಟೌಟ್: ಎಟಿಎಂ ವಾಹನವೊಂದನ್ನು ತಡೆದಿರುವ ಚುನಾವಣಾಧಿಕಾರಿಗಳು ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಲಕ್ಷಾಂತರ ರೂ. ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆಯ ಕಲ್ಲುಗುಂಡಿಯಿಂದ ವರದಿಯಾಗಿದೆ.
ಬ್ಯಾಂಕ್ವೊಂದು ತನ್ನ ಎಟಿಎಂಗೆ ಹಣ ತುಂಬಿಸಲು ಲಕ್ಷಾಂತರ ರೂ. ಹಣವನ್ನು ಸಾಗಿಸುತ್ತಿತ್ತು. ಇದನ್ನು ಕಲ್ಲುಗುಂಡಿಯ ಚೆಕ್ ಪೋಸ್ಟ್ ಬಳಿ ಪೊಲೀಸರು ಹಾಗೂ ಚುನಾವಣಾಧಿಕಾರಿಗಳು ತಡೆಹಿಡಿದಿದ್ದಾರೆ. ಹಣ ಸಾಗಿಸಲು ಅನುಮತಿ ಪಡೆದುಕೊಂಡಿರುವ ದಾಖಲೆಗಳನ್ನು ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಆದರೆ ಅಲ್ಲಿ ಸರಿಯಾದ ದಾಖಲೆಗಳು ಇಲ್ಲದಿರುವುದರಿಂದ ಎಟಿಎಂ ಹಣ ಸಾಗಿಸುತ್ತಿದ್ದ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಉನ್ನತ ಮಟ್ಟದ ಅಧಿಕಾರಿಗಳು ಬಂದು ಕೊನೆಗೆ ಎಟಿಎಂ ಹಣ ಸಾಗಿಸುತ್ತಿದ್ದ ವಾಹನವನ್ನು ಸುಳ್ಯಕ್ಕೆ ಕರೆ ತರಲಾಗಿದೆ ಎಂದು ತಿಳಿದು ಬಂದಿದೆ. ಸದ್ಯ ಚುನಾವಣಾ ಸಮಯ ಆಗಿರುವುದರಿಂದ ಯಾವುದೇ ಹಣವನ್ನು ಸಾಗಿಸುವ ಸಂದರ್ಭದಲ್ಲಿ ಅದಕ್ಕೆ ದಾಖಲೆಗಳನ್ನು, ಸೂಕ್ತ ಅನುಮತಿಯನ್ನು ಸಂಬಂಧಪಟ್ಟವರಿಂದ ಪಡೆದುಕೊಳ್ಳಬೇಕು. ಆದರೆ ಈ ನಿಯಮವನ್ನು ಬ್ಯಾಂಕ್ವೊಂದು ಮುರಿದುಕೊಂಡಿದ್ದರಿಂದ ಇಕ್ಕಟ್ಟಿಗೆ ಸಿಲುಕಿದೆ ಅನ್ನುವಂತಹ ಮಾಹಿತಿಗಳು ನ್ಯೂಸ್ ನಾಟೌಟ್ ಗೆ ಲಭ್ಯವಾಗಿದೆ.