ನ್ಯೂಸ್ ನಾಟೌಟ್: ಬಹುಮಹಡಿ ಮನೆಯೊಂದರಲ್ಲಿ ನಿನ್ನೆ ಎಪ್ರಿಲ್ ೬ ರಸಂಜೆ ಸಂಭವಿಸಿದ ಭಾರೀ ಬೆಂಕಿ ಅವಘಡದಲ್ಲಿ ನಾಲ್ವರು ಮಕ್ಕಳು ಸಜೀವ ದಹನವಾಗಿದ್ದಾರೆ, ಈ ಘಟನೆ ಉತ್ತರಾಖಂಡ ರಾಜಧಾನಿ ಡೆಹ್ರಾಡೂನ್ ನಿಂದ 155 ಕಿ.ಮೀ ದೂರದಲ್ಲಿರುವ ತುನಿ ಎಂಬ ಸೇತುವೆ ಬಳಿಯ ಕಟ್ಟಡದಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಸಿಲಿಂಡರ್ ಸ್ಫೋಟದಿಂದ ಮನೆಗೆ ಬೆಂಕಿ ಹೊತ್ತಿಕೊಂಡಿದ್ದು, ಇಡೀ ಮನೆ ಸುಟ್ಟು ಕರಕಲಾಗಿದೆ ಮನೆಯಲ್ಲಿದ್ದ ಸಿಲಿಂಡರ್ಗಳು ಒಂದರ ಹಿಂದೆ ಒಂದರಂತೆ ಸ್ಫೋಟಗೊಂಡಿವೆ ಎನ್ನಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ತುನಿಯಲ್ಲಿರುವ ಸೂರತ್ ರಾಮ್ ಜೋಶಿ ಅವರ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಸಂಜೆ 4 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ. ಈ ಕಟ್ಟಡದಲ್ಲಿ ಮಾಲೀಕನ ಜತೆಗೆ ಐದು ಕುಟುಂಬಗಳು ಬಾಡಿಗೆಗೆ ವಾಸವಾದ್ದವು, ಬೆಂಕಿ ಹೊತ್ತಿಕೊಂಡ ಸಮಯದಲ್ಲಿ ಬಾಡಿಗೆದಾರರ ಐದು ಮಕ್ಕಳು, ಇಬ್ಬರು ಪುರುಷರು ಮತ್ತು ಒಬ್ಬ ಮಹಿಳೆ ಮನೆಯಲ್ಲಿದ್ದರು ಎನ್ನಲಾಗಿದೆ.
ಸಂಜೆ ಬಾಡಿಗೆದಾರರಲ್ಲಿ ಒಬ್ಬರಾದ ವಿಕ್ಕಿ ಅವರ ಪತ್ನಿ ಕುಸುಮ ಅಡುಗೆ ಕೋಣೆಯಲ್ಲಿ ಎಲ್ಪಿಜಿ ಸಿಲಿಂಡರ್ ಬದಲಾಯಿಸುತ್ತಿದ್ದಾಗ ಏಕಾಏಕಿ ಸಿಲಿಂಡರ್ಗೆ ಬೆಂಕಿ ಹೊತ್ತಿಕೊಂಡಿದೆ. ಕುಸುಮ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ, ಆದರೆ ಬೆಂಕಿ ಇಡೀ ಮನೆಗೆ ಆವರಿಸಿದೆ.
“ಮನೆಯಿಂದ ಹೊಗೆ ಬರುತ್ತಿರುವುದನ್ನು ನೋಡಿ ಇತರ ಕುಟುಂಬಗಳ ಸದಸ್ಯರು, ಹತ್ತಿರದ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಅಲ್ಲದೆ ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಆದರೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬರಲು ತುಂಬ ತಡವಾಗಿದ್ದು ಅನಾಹುತ ನಡೆದುಹೋಗಿದೆ.
ಮನೆಯೊಳಗಿದ್ದ ನಾಲ್ವರು ಮಕ್ಕಳು ಬೆಂಕಿಗೆ ಆಹುತಿಯಾಗಿದ್ದು, ಮೃತರನ್ನು ತುನಿಯ ಜಕ್ತಾ ನಿವಾಸಿ ತ್ರಿಲೋಕ್ ಎಂಬವರ ಪುತ್ರಿ ಗುಂಜನ್(10), ಹಿಮಾಚಲ ಪ್ರದೇಶದ ಬಿಕ್ತದ್ನ ಜಯಲಾಲ್ ಎಂಬುವವರ ಪುತ್ರಿ ರಿದ್ಧಿ(10), ವಿಕ್ಕಿ ಚೌಹಾಣ್ ಅವರ ಮಕ್ಕಳಾದ ಆದಿರಾ ಅಲಿಯಾಸ್ ಮಿಶ್ತಿ(6) ಮತ್ತು ಸೇಜಲ್(3) ಎಂದು ಗುರುತಿಸಲಾಗಿದೆ.