ನ್ಯೂಸ್ ನಾಟೌಟ್ :ಚುನಾವಣೆ ಬಂದಾಗ ಸಾರ್ವಜನಿಕ ಶಾಂತಿ ಮತ್ತು ಶಿಸ್ತುಪಾಲನಾ ಮುಂಜಾಗ್ರತ ಕ್ರಮವಾಗಿ ಶಸ್ತ್ರಾಸ್ತ್ರ ಠೇವಣಿಗೆ ಆದೇಶಿಸುವುದು ನಿಯಮ.ಆದರೆ ದ.ಕ ಜಿಲ್ಲೆಯ ರೈತರಿಗೆ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಅವರು ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.ಅದೇನೆಂದರೆ ರೈತರು ಕೋವಿ ಠೇವಣಿ ಇಡುವ ವಿಚಾರದಲ್ಲಿ ಕೆಲ ಸಡಿಲಿಕೆಗಳನ್ನು ಮಾಡಿದ್ದಾರೆ. ಅಪರಾಧ ಹಿನ್ನಲೆ ಜಾಮೀನಿನಲ್ಲಿ ಬಿಡುಗಡೆಯಾದವರು, ಈ ಹಿಂದೆ ಚುನಾವಣೆ ಸಂದರ್ಭದಲ್ಲಿ ದೊಂಬಿ ಗಲಾಟೆಯಲ್ಲಿ ಭಾಗಿಯಾದವರನ್ನು ಹೊರತುಪಡಿಸಿ ಉಳಿದ ರೈತರಿಗೆ ಶಸ್ತ್ರಾಸ್ತ್ರ ಠೇವಣಿಯಲ್ಲಿ ವಿನಾಯಿತಿ ನೀಡಿದ್ದಾರೆ.
ರಾಜ್ಯದಲ್ಲಿ ಚುನಾವಣೆ ಬಂದಿರುವುದರಿಂದ ಶಸ್ತ್ರಾಸ್ತ್ರ ಠೇವಣಿ ಮಾಡುವಂತೆ ರಾಜ್ಯದಲ್ಲಿ ಆದೇಶ ಮಾಡಲಾಗಿದ್ದು, ಈ ಆದೇಶದಿಂದಾಗಿ ಬೆಳೆ ರಕ್ಷಣೆಗಾಗಿ ಕೋವಿಗಳನ್ನು ಹೊಂದಿರುವ ರೈತರಿಗೆ ತೊಂದರೆಯಾಗುತ್ತಿದೆ ಇದನ್ನು ಮನಗಂಡ ದ.ಕ ಜಿಲ್ಲಾಧಿಕಾರಿ ಶಸ್ತ್ರಾಸ್ತ್ರ ಕಾಯ್ದೆಯಡಿ ಪರವಾನಿಗೆದಾರರಿಗೆ ಬೆಳೆ ರಕ್ಷಣೆಗಾಗಿ ಶಸ್ತ್ರಾಸ್ತ್ರದ ಅವಶ್ಯಕತೆ ಇದ್ದರೆ ಪೂರಕ ದಾಖಲೆಗಳೊಂದಿಗೆ ತಾಲೂಕು ತಹಶೀಲ್ದಾರರಿಗೆ ಅಹವಾಲುಗಳನ್ನು ಸಲ್ಲಿಸಬಹುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಇದಕ್ಕಾಗಿ ಜಿಲ್ಲೆಯ ಪ್ರತಿ ತಾಲೂಕುಗಳಲ್ಲಿ ಸ್ಕ್ರೀನಿಂಗ್ ಸಮಿತಿಗಳನ್ನು ರಚಿಸಲಾಗಿದೆ. ಈ ಸಮಿತಿಗಳಲ್ಲಿ ತಹಶೀಲ್ದಾರ್, ಪೊಲೀಸ್ ಉಪನಿರೀಕ್ಷಕರು, ವಲಯ ಅರಣ್ಯಾಧಿಕಾರಿ, ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು ಇರಲಿದ್ದಾರೆ. ಈ ಸಮಿತಿ ಅಹವಾಲುಗಳ ಪರಿಶೀಲಿಸಿ ಅರ್ಹ ಪ್ರಕರಣಗಳಲ್ಲಿ ಶಸ್ತ್ರಾಸ್ತ್ರಗಳನ್ನು ಹಾಗೂ ಆತ್ಮ ರಕ್ಷಣೆಗಾಗಿ ಆಯುಧದ ಅವಶ್ಯಕತೆ ಇದ್ದವರಿಗೆ ಠೇವಣಿ ಇಡುವುದರಿಂದ ವಿನಾಯಿತಿ ನೀಡಲು ಅವಕಾಶ ನೀಡಲಾಗಿದೆ.