ನ್ಯೂಸ್ ನಾಟೌಟ್ : ಆಧುನಿಕತೆ ಭರಾಟೆಯಲ್ಲಿ ಕಳ್ಳರು ಕೂಡ ಅಪ್ ಡೇಟ್ ಆಗುತ್ತಿದ್ದಾರೆ ಅನ್ನೊದಕ್ಕೆ ಬೆಳ್ತಂಗಡಿಯ ಈ ಘಟನೆಯೇ ನೇರ ಸಾಕ್ಷಿ.ಕೂಡಿಟ್ಟ ಹಣವನ್ನು,ತೆಗೆದಿಟ್ಟ ಚಿನ್ನವನ್ನು ದೋಚುತ್ತಿದ್ದ ಕಳ್ಳರು ಇದೀಗ ಗೂಗಲ್ ಪೇ ಗೂ ಕನ್ನ ಹಾಕುತ್ತಿದ್ದಾರೆ ಅಂದರೆ ಎಲ್ಲರೂ ಶಾಕ್ ಆಗಬೇಕಾದ ವಿಚಾರ.
ಬೆಳ್ತಂಗಡಿ ತಾಲೂಕಿನ ಪಡಂಗಡಿಯಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಪರಿಚಯಸ್ಥರೇ ಸೇರಿಕೊಂಡು ವ್ಯಕ್ತಿಯೊಬ್ಬರನ್ನು ಕಟ್ಟಿ ಹಾಕಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ಇದಾದ ಬಳಿಕ ವ್ಯಕ್ತಿಯನ್ನು ಬೆದರಿಸಿ ‘ಗೂಗಲ್ ಪೇ’ ಮೂಲಕ ಹಣ ವರ್ಗಾಯಿಸಿಕೊಂಡಿದ್ದಾರೆ. ಮನೆಯಂಗಳದಲ್ಲಿದ್ದ ದ್ವಿಚಕ್ರ ವಾಹನವನ್ನು ಕದ್ದೊಯ್ದು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.ಮನೆಯಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ರಿಯಾಜ್ ಮತ್ತು ಫೈಜಲ್ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿ ಪಡಂಗಡಿ ಗ್ರಾಮದ ಜಾನೆಬೈಲು ಬಳಿಯ ನಿವಾಸಿ ಜುವಾಮ್ ಗೋವಿಯಸ್ ಅವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.
ಮಗನ ಕಾಲ್ ಬಂತೆಂದು ಜುವಾಮ್ ಗೋವಿಯಸ್ ಎಂಬುವವರು ಮನೆಯ ಸಮೀಪದ ರಬ್ಬರ್ ಶೆಡ್ ಬಳಿ ನಿಂತು ಮೊಬೈಲ್ನಲ್ಲಿ ಮಾತನಾಡುತ್ತಿದ್ದ ರು. ಇದೇ ಸರಿಯಾದ ಸಮಯವೆಂದು ಸ್ಥಳಕ್ಕೆ ಬಂದ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಆ ವೇಳೆ ಜುವಾಮ್ ಗೋವಿಯಸ್ ಆಯತಪ್ಪಿ ನೆಲಕ್ಕೆ ಬಿದ್ದಿದ್ದಾರೆ. ಈ ಸಂದರ್ಭ ಕುತ್ತಿಗೆ ಬಿಗಿದು ಬೆದರಿಸಿ ಗೂಗಲ್ ಪಿನ್ ಕೇಳಿ ಅವರ ಮೊಬೈಲ್ ನಿಂದ ₹ 82 ಸಾವಿರವನ್ನು ಬೇರೆ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ ಎನ್ನಲಾಗಿದೆ.ಇವಿಷ್ಟು ಮಾತ್ರವಲ್ಲದೇ ಕೈನಲ್ಲಿದ್ದ ಮೊಬೈಲ್ ಹಾಗೂ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ 2,82,000 ರೂ. ಮೌಲ್ಯದ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಕದ್ದು ಪರಾರಿಯಾಗಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.