ನ್ಯೂಸ್ ನಾಟೌಟ್ :ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ನೀತಿ ಸಂಹಿತೆ ಜಾರಿಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಗಡಿ ಚೆಕ್ ಪೋಸ್ಟ್ ಗಳಲ್ಲಿ ಪೊಲೀಸರು ತಪಾಸಣೆಯನ್ನು ಬಿಗಿಗೊಳಿಸಿದ್ದಾರೆ. ಯಾವುದೇ ಚುನಾವಣಾ ಅಕ್ರಮಗಳು ನಡೆಯದಂತೆ ಹದ್ದಿನ ಕಣ್ಣಿಟ್ಟಿದ್ದಾರೆ.
ಸುಳ್ಯ ವ್ಯಾಪ್ತಿಗೆ ಸಂಬಂಧಿಸಿದಂತೆ ಕಲ್ಲುಗುಂಡಿ ಜಿಲ್ಲಾ ಗಡಿ ಪೊಲೀಸ್ ಚೆಕ್ಪೋಸ್ಟ್, ಸಂಪಾಜೆ ಅರಣ್ಯ ಚೆಕ್ಪೋಸ್ಟ್, ಜಾಲ್ಸೂರು ಪೊಲೀಸ್ ಚೆಕ್ ಪೋಸ್ಟ್, ಆಲೆಟ್ಟಿ ಸಮೀಪದ ನಾರ್ಕೋಡು ರಾಜ್ಯ ಗಡಿ ಪೊಲೀಸ್ ಚೆಕ್ಪೋಸ್ಟ್, ಮಂಡೆಕೋಲು ಪೊಲೀಸ್ ಚೆಕ್ ಪೋಸ್ಟ್, ಮಂಡೆಕೋಲು ಗ್ರಾಮದ ಮುರೂರು ರಾಜ್ಯ ಗಡಿ ಚೆಕ್ ಪೋಸ್ಟ್ ಗಳು ತಾಲೂಕು ವ್ಯಾಪ್ತಿಯಲ್ಲಿ ಬರುವ ಪ್ರಮುಖ ಚೆಕ್ ಪೋಸ್ಟ್ ಗಳಾಗಿದ್ದು, ಇಲ್ಲೆಲ್ಲ ಬಾರೀ ಕಟ್ಟೆಚ್ಚರ ವಹಿಸಲಾಗಿದೆ.
ನೀತಿ ಸಂಹಿತೆ ಜಾರಿಯಾಗುತ್ತಲೇ ಚೆಕ್ ಪೋಸ್ಟ್ ಗಳಲ್ಲಿ ಸಂಚರಿಸುವ ವಾಹನಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ಪೊಲೀಸರು ಎಲ್ಲಾ ರೀತಿಯಲ್ಲೂ ತಪಾಸಣೆ ಮಾಡುತ್ತಿದ್ದು, ಯಾವುದೇ ಅಕ್ರಮಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ಹಗಲು ಹಾಗೂ ರಾತ್ರಿಯಲ್ಲೂ ನಿರಂತರ ತಪಾಸಣಾ ವ್ಯವಸ್ಥೆ ಮುಂದುವರಿದಿದ್ದು, ಚೆಕ್ ಪೋಸ್ಟ್ ಗಳಲ್ಲಿ ಸಿಸಿ ಕ್ಯಾಮರಾ ಗಳ ವ್ಯವಸ್ಥೆಗಳನ್ನು ಮಾಡಲಾಗಿದೆ.
ಸುಳ್ಯ ತಾಲೂಕು ವ್ಯಾಪ್ತಿಗೆ ಸಂಬಂಧಿಸಿದಂತೆ ಕಾಸರಗೋಡು ಜಿಲ್ಲಾ ಗಡಿಯನ್ನು ಹೊಂದಿಕೊಂಡಿದ್ದು, ಮಂಡೆಕೋಲು, ಮುರೂರು, ನಾರ್ಕೋಡು ಚೆಕ್ಪೋಸ್ಟ್ ಗಳಲ್ಲಿ ಹೊರ ರಾಜ್ಯಗಳಿಂದ ಬರುವ ಹಾಗೂ ಹೊರ ರಾಜ್ಯಕ್ಕೆ ಸಂಚರಿಸುವ ವಾಹನಗಳ ಮೇಲೂ ಪೊಲೀಸರು ವಿಶೇಷ ನಿಗಾ ಇರಿಸಿದ್ದಾರೆ. ಅಲ್ಲದೆ ಪೊಲೀಸರು ತಾಲೂಕು ವ್ಯಾಪ್ತಿಯಲ್ಲಿ ಪೊಲೀಸರು ಗಸ್ತು ತಿರುಗಿ ಯಾವುದೇ ರೀತಿಯಲ್ಲೂ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಕ್ರಮ ವಹಿಸುತ್ತಿದ್ದಾರೆ.