ನ್ಯೂಸ್ ನಾಟೌಟ್: ನವಜಾತ ಶಿಶುವನ್ನು ಆಂಜನೇಯ ಸ್ವಾಮಿ ದೇವಸ್ಥಾನ ಬಳಿ ಬಿಟ್ಟು ಹೋದ ಅಮಾನವೀಯ ಘಟನೆ ಬೆಂಗಳೂರಿನಲ್ಲಿ ಮಂಗಳವಾರ ನಡೆದಿದೆ.
ಮಂಗಳವಾರ ತಡರಾತ್ರಿ 2:30ರ ಸುಮಾರಿಗೆ ಆಗಷ್ಟೇ ತಾಯಿಯ ಹೊಟ್ಟೆಯಿಂದ ಜನ್ಮ ಪಡೆದ ಗಂಡು ಮಗುವನ್ನು ಅನಾಥವಾಗಿ ದೇವಸ್ಥಾನದ ಬಾಗಿಲ ಬಳಿ ಬಿಟ್ಟು ಹೋದ ಘಟನೆ ಯಶವಂತಪುರದಲ್ಲಿ ನಡೆದಿದೆ.
ಮಧ್ಯರಾತ್ರಿಯ ವೇಳೆ ಮಗು ಒಂದೇ ಸಮನೆ ಅಳುವ ಶಬ್ದ ಕೇಳಿ ಹೊರಗೆ ಬಂದು ನೋಡಿದಾಗ ದೇವಸ್ಥಾನದ ಬಳಿ ಮಗು ಪತ್ತೆಯಾಗಿದೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಆಗಮಿಸಿದ ಹೊಯ್ಸಳ ಸಬ್ಬಂದಿ ಅಮರೇಶ್, ಕೆಂಪರಾಜು ಮಗುವಿನ ರಕ್ಷಣೆ ಮಾಡಿದ್ದಾರೆ.
ಆಂಬ್ಯುಲೆನ್ಸ್ಗೆ ಕರೆ ಮಾಡಿದಾಗ ಚಾಲಕ ಅರ್ಧ ಗಂಟೆ ತಡವಾಗುತ್ತದೆ ಎಂದಿದ್ದಕ್ಕೆ ಹೊಯ್ಸಳ ವಾಹನದಲ್ಲೇ ಆಸ್ಪತ್ರೆಗೆ ಶಿಶುವನ್ನು ಕರೆದೊಯ್ದು ದಾಖಲಿಸಿದ್ದಾರೆ. ಐಪಿಸಿ 317 ಅಡಿಯಲ್ಲಿ ಅಶವಂತಪುರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ವರದಿ ತಿಳಿಸಿದೆ.