ನ್ಯೂಸ್ ನಾಟೌಟ್ : ಮೃತಪಟ್ಟ ಪೊಲೀಸ್ ಅಧಿಕಾರಿಯೊಬ್ಬರ 5 ವರ್ಷದ ಮಗನಿಗೆ ಮಕ್ಕಳ ಕಾನ್ಸ್ಟೇಬಲ್ ಹುದ್ದೆ ದೊರಕಿದೆ. ಅನುಕಂಪದ ಆಧಾರದಲ್ಲಿ ಮಗುವಿಗೆ ಛತ್ತೀಸ್ಗಢದ ಸರ್ಗುಜಾದಲ್ಲಿ ಈ ಹುದ್ದೆ ಲಭಿಸಿದೆ ಎಂದು ವರದಿ ತಿಳಿಸಿದೆ.
ಯುಕೆಜಿ ವಿದ್ಯಾರ್ಥಿಯಾಗಿರುವ ನಮನ್ ರಾಜವಾಡೆ ಮಕ್ಕಳ ಕಾನ್ಸ್ಟೇಬಲ್ ಆಗಿ ನೇಮಕಗೊಂಡ ಬಾಲಕನಾಗಿದ್ದು, ಪೊಲೀಸ್ ಅಧಿಕಾರಿಯಾಗಿದ್ದ ಬಾಲಕನ ತಂದೆ ರಾಜ್ಕುಮಾರ್ ರಾಜವಾಡೆ ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದರು. ಅವರ ಸಾವಿನ ಬೆನ್ನಲ್ಲೇ ಆಡಳಿತ ಮಂಡಳಿಯು ರಾಜ್ಕುಮಾರ್ ಅವರ ಪುತ್ರ, ಐದರ ಎಂಬ ಹೆಸರಿನ ಬಾಲಕನನ್ನು ಅನುಕಂಪದ ಆಧಾರದ ಮೇಲೆ ಮಕ್ಕಳ ಕಾನ್ಸ್ಟೇಬಲ್ ಆಗಿ ನೇಮಕ ಮಾಡಿದೆ ಎಂದು ತಿಳಿದು ಬಂದಿದೆ.
ಇನ್ನು ಮಗುವಿಗೆ ಸಿಕ್ಕಿದ ಹೊಸ ಹುದ್ದೆಯ ಬಗ್ಗೆ, ಮಾತನಾಡಿದ ನಮನ್ ತಾಯಿ ನಿತು ರಾಜ್ವಾಡೆ, “ಪತಿ ಅಪಘಾತದಲ್ಲಿ ಸಾವನ್ನಪ್ಪಿದ್ದರಿಂದ ದಿಕ್ಕೇ ತೋಚದಂತಾಗಿತ್ತು. ಈಗ ಮಗನನ್ನು ಮಕ್ಕಳ ಕಾನ್ಸ್ಟೇಬಲ್ ಆಗಿ ನೇಮಕ ಮಾಡಿರುವುದರಿಂದ ನನಗೆ ಖುಷಿಯಾಗಿದೆ” ಎಂದಿದ್ದಾರೆ.
ಇನ್ನು ಈ ನೇಮಕದ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ವರಿಷ್ಠಾಧಿಕಾರಿ ಭಾವನಾ ಗುಪ್ತಾ, “ಆಡಳಿತ ಹಾಗೂ ಪೊಲೀಸ್ ಪ್ರಧಾನ ಕಚೇರಿಯ ಮಾರ್ಗಸೂಚಿಯನುಸಾರ ಈ ತೀರ್ಮಾನ ಕೈಗೊಳ್ಳಲಾಗಿದೆ. ಪೊಲೀಸ್ ಅಧಿಕಾರಿಯಾಗಿರುವವರು ಮೃತಪಟ್ಟ ಸಂದರ್ಭದಲ್ಲಿ ಅವರ ಕುಟುಂಬದಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿದ್ದರೆ ಅವರನ್ನು ಅನುಕಂಪದ ಆಧಾರದಲ್ಲಿ ನೇಮಮಿಸಲಾಗುತ್ತದೆ. ಇದೇ ಮಾದರಿಯಲ್ಲಿ, ನಮನ್ ನೇಮಕಾತಿ ನಡೆದಿದೆ” ಎಂದಿರುವುದಾಗಿ ಮಾಹಿತಿ ನೀಡಿದ್ದಾರೆ.