ನ್ಯೂಸ್ ನಾಟೌಟ್: ದಾಖಲೆ ಇಲ್ಲದೆ ಪಿಕಪ್ನಲ್ಲಿ ಸಾಗಿಸುತ್ತಿದ್ದ 2. 30 ಕೋಟಿ ರೂ. ಮೌಲ್ಯದ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ಚಿಕ್ಕಮಗಳೂರಿನ ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನ ಹತ್ತಿರವಾಗುತ್ತಿದ್ದಂತೆ ಕಾರ್ಯಾಚರಣೆಗಿಳಿದಿರುವ ಚುನಾವಣಾ ಆಯೋಗ ಮತ್ತು ಪೊಲೀಸರು ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಕೋಟಿ ಕೋಟಿ ರೂ. ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.
ಚುನಾವಣೆ ನಿಮಿತ್ತ ಜಿಲ್ಲಾದ್ಯಂತ ಗಡಿಗಳಲ್ಲಿ ಚೆಕ್ ಪೋಸ್ಟ್ಗಳನ್ನು ನಿರ್ಮಿಸಲಾಗಿದೆ. ಅದೇ ರೀತಿ ತರೀಕೆರೆ ಪಟ್ಟಣದ ಪೊಲೀಸ್ ಚೆಕ್ ಪೋಸ್ಟ್ ಬಳಿ ತಪಾಸಣೆ ನಡೆಸಿದಾಗ ಇಬ್ಬರು ವ್ಯಕ್ತಿಗಳು ಪಿಕಪ್ನಲ್ಲಿ ನಾಲ್ಕು ಬಾಕ್ಸ್ ಚಿನ್ನ ಅಕ್ರಮ ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ. ಪಿಕಪ್ ವಾಹನದಲ್ಲಿ ಚಿನ್ನದ ಸರಗಳು ಹಾಗೂ ಚಿನ್ನದ ಬಿಸ್ಕತ್ಗಳು ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.
ಅಕ್ರಮ ಸಾಗಾಟ ಹಿನ್ನೆಲೆ ಹಲವು ಅನುಮಾನ ಮೂಡಿಸಿದ್ದರಿಂದ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, 9 ಕೆಜಿ 300 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ ಎಮದು ಮೂಲಗಳು ತಿಳಿಸಿವೆ. ನಾಲ್ಕು ಬಾಕ್ಸ್ನಲ್ಲಿ ಚಿನ್ನವನ್ನು ಇಬ್ಬರು ವಾಹನದಲ್ಲಿ ತರುತ್ತಿದ್ದರು.
ಪಿಕಪ್ ವಾಹನ ಸವಾರ ಸೇರಿ ಇಬ್ಬರನ್ನು ವಶಕ್ಕೆ ಪಡೆದು ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಬುಧವಾರವಷ್ಟೇ ಚಿಕ್ಕಮಗಳೂರಿನಲ್ಲಿ ದಾಳಿ ನಡೆಸಿದ್ದ ಅಧಿಕಾರಿಗಳು 666ಕ್ಕೂ ಹೆಚ್ಚು ಸೀರೆಗಳನ್ನು ವಶಕ್ಕೆ ಪಡೆದಿದ್ದರು. ಚುನಾವಣೆಯಲ್ಲಿ ಹಂಚಲು ಖಾಸಗಿ ಗೋದಾಮಿನಲ್ಲಿ ಸೂರತ್ನಿಂದ ಸೀರೆಗಳನ್ನು ತರಿಸಿ ಸಂಗ್ರಹಿಸಲಾಗಿತ್ತು. ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ವರದಿ ತಿಳಿಸಿದೆ.