ನ್ಯೂಸ್ ನಾಟೌಟ್: ಮಗಳ ಮದುವೆಗೆ ಚಿನ್ನ ಖರೀದಿಸಲು ಬಂದಾಗ ಅಪರಿಚಿತ ವ್ಯಕ್ತಿ ಹತ್ತು ಲಕ್ಷ ನಗದು ಹಣ ದೋಚಿ ಪರಾರಿಯಾಗಿರುವ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇಳಂತಿಲ ಗ್ರಾಮದ ಕಾಯರ್ಪಾಡಿ ನಿವಾಸಿ ಮಹಮ್ಮದ್ ಕೆ. ಎಂಬವರು ತನ್ನ ಮಗಳ ಮದುವೆಗಾಗಿ ಚಿನ್ನಾಭರಣ ಖರೀದಿಸಲು ಸ್ಕೂಟರ್ನಲ್ಲಿ ಬಂದಿದ್ದರು.
10,00,000 ರೂಪಾಯಿ ನಗದು ಹಣವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಅದನ್ನು ಒಂದು ಬಿಳಿಬಟ್ಟೆಯ ಚೀಲದಲ್ಲಿ ತುಂಬಿಸಿ ಸ್ಕೂಟರ್ ನ ಸೀಟಿನ ಅಡಿಯಲ್ಲಿ ಜೋಪಾನವಾಗಿ ಇಟ್ಟಿದ್ದರು. ಚಿನ್ನಾಭರಣ ಖರೀದಿಸಲು ಪತ್ನಿಯೊಂದಿದೆ ಉಪ್ಪಿನಂಗಡಿ ಜ್ಯುವೆಲ್ಲರಿಗೆ ಹೋಗುತ್ತಿರುವಾಗ ದಾರಿಯ ಮಧ್ಯೆ ಸರಳಿಕಟ್ಟೆಯ ಕಂಪ್ಲೋಡಿ ಎಂಬಲ್ಲಿರುವ ಮಹಮ್ಮದ್ ರವರ ಅತ್ತೆ ಬಿಫಾತುಮ್ಮ ಎಂಬವರು ಮರಣ ಹೊಂದಿರುವ ಮಾಹಿತಿ ತಿಳಿಯುತ್ತದೆ.
ಆ ಕೂಡಲೇ ಸ್ಕೂಟರನ್ನು ತಿರುಗಿಸಿ ಪೆದಮಲೆಯಿಂದ ಸರಳಿಕಟ್ಟೆ ರಸ್ತೆಯಲ್ಲಿ ಹೋಗುತ್ತಿದ್ದಾಗ ಇಳಂತಿಲ ಗ್ರಾಮದ ರಿಫಾಯಿನಗರ ಎಂಬಲ್ಲಿಗೆ ತಲುಪಿದಾಗ ಸ್ಕೂಟರ್ ನಿಂದ ಆಯ ತಪ್ಪಿ ಇಬ್ಬರು ಬೀಳುತ್ತಾರೆ. ಮಹಮ್ಮದ್ ಕೆ ಅವರ ಪತ್ನಿ ಮೈಮುನರವರು ರಸ್ತೆಗೆ ಬಿದ್ದು ಸಣ್ಣ ಪುಟ್ಟ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಅಟೋ ರಿಕ್ಷಾದಲ್ಲಿ ಸ್ಕೂಟರಿನಲ್ಲಿದ್ದ ಹಣದ ಕಟ್ಟನ್ನು ಹಿಡಿದುಕೊಂಡು ಉಪ್ಪಿನಂಗಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು, ಚಿಕಿತ್ಸೆ ಕೊಡಿಸಿದ ನಂತರ ಅಟೋರಿಕ್ಷದಲ್ಲಿ ಅವರ ಪತ್ನಿಯನ್ನು ಮನೆಗೆ ಬಿಟ್ಟು ವಾಪಸ್ ಸ್ಕೂಟರ್ ಬಿದ್ದ ಸ್ಥಳಕ್ಕೆ ಬಂದರು.
ಕೈಯಲ್ಲಿದ್ದ ಹಣದ ಕಟ್ಟನ್ನು ಸ್ಕೂಟರ್ ನ ಸೀಟಿನಡಿಯಲ್ಲಿರುವ ಬಾಕ್ಸ್ ನಲ್ಲಿ ಇಡುತ್ತಿದ್ದಂತೆಯೇ ಓರ್ವ ಅಪರಿಚಿತ ವ್ಯಕ್ತಿ ಬಂದು ಹಣವನ್ನು ಬಲವಂತವಾಗಿ ದೋಚಿದ್ದಾನೆ ಎನ್ನಲಾಗಿದೆ. ಕೂಡಲೇ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲು ಮಾಡಿದ್ದು, ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.