ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಗೋ ಸಾಗಾಟದ ವಿರುದ್ಧ ಹೋರಾಟ ನಡೆಯುತ್ತಲೇ ಇದ್ದು, ಅನೇಕ ಬಾರಿ ಬಜರಂಗದಳ ಮತ್ತು ಇತರ ಸಂಘಟನೆಗಳು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಜಾನುವಾರುಗಳನ್ನು ರಕ್ಷಿಸಿದ ಉದಾಹರಣೆಗಳಿವೆ. ಆದರೆ, ಇಲ್ಲಿ ಅಂತಹದ್ದೇ ಒಂದು ಘಟನೆಯಲ್ಲಿ ರಕ್ಷಕರೇ ಭಕ್ಷಕರಾದರೊ ಎಂಬ ಅನುಮಾನ ಮೂಡಿಸುವಂತೆ ಮಾಡಿದೆ.
ಉಪ್ಪಿನಂಗಡಿಯಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸಲು ಸಿದ್ಧತೆ ನಡೆಸಿರುವುದನ್ನು ಕಂಡು ಅನುಮಾನಗೊಂಡ ಸ್ಥಳೀಯ ಸಾಮಾಜಿಕ ಕಾರ್ಯಕರ್ತರೋರ್ವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಪರ್ಯಾಸವೆಂದರೆ ಈ ಮಾಹಿತಿ ನೀಡಿದವರಿಗೆ ದೂರು ನೀಡಿದ ಕೆಲ ಗಂಟೆಗಳ ಬಳಿಕ ಅನಾಮದೇಯ ತಂಡವೊಂದು ಕರೆ ಮಾಡಿ ಬೆದರಿಕೆ ಹಾಕಿದ ಬಗ್ಗೆ ವರದಿಯಾಗಿದೆ.
ಮಾರ್ಚ್ 11ರಂದು ಉಪ್ಪಿನಂಗಡಿಯಲ್ಲಿ ನಡೆದ ಕಂಬಳದ ವೇಳೆ ಜಾನುವಾರುಗಳನ್ನು ನಿರ್ಜನ ಪ್ರದೇಶವೊಂದರಲ್ಲಿ ಕಟ್ಟಿ ಹಾಕಿರುವುದು ಉಪ್ಪಿನಂಗಡಿಯ ಸಾಮಾಜಿಕ ಕಾರ್ಯಕರ್ತರೊಬ್ಬರು ನೋಡಿ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕ್ರಮ ಕೈಗೊಳ್ಳಬೇಕಾದ ಪೊಲೀಸರು ಕಾರ್ಯಾಚರಣೆಗೆ ಇಳಿಯದೆ ಅಕ್ರಮ ಗೋ ಸಾಗಾಟಗಾರರೇ ಕಾರ್ಯಾಚರಣೆ ಕೈಗೊಂಡಂತೆ ಘಟನೆ ತಿರುವು ಪಡೆದಿದೆ.
ಕಂಬಳದ ದಿನ ಜಾನುವಾರುಗಳ ಸಾಗಾಟದಿಂದ ಯಾರಿಗೂ ಅನುಮಾನ ಬಾರದು ಎಂಬ ಉದ್ದೇಶದಿಂದ ಈ ಕೆಲಸ ಮಾಡಿದ್ದಾರೆ ಎಂಬ ಸಂಶಯ ಸಾಮಾಜಿಕ ಕಾರ್ಯಕರ್ತನಿಗೆ ಮೂಡಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.
ತಕ್ಷಣವೇ ಜಾನುವಾರುಗಳನ್ನು ಕಟ್ಟಿ ಹಾಕಿದ ಸಂಬಂಧಿತ ವ್ಯಕ್ತಿಗಳ ಕಡೆಯಿಂದ ಬೆದರಿಕೆ ಕರೆಗಳು ಬಂದಿದ್ದು, ತಾನು ಪೊಲೀಸರಿಗೆ ನೀಡಿದ ಮಾಹಿತಿ ಇವರಿಗೆ ಹೇಗೆ ತಲುಪಿತು ಎಂದು ದೂರುದಾರರು ಅನುಮಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ‘ನನ್ನ ಜೀವಕ್ಕೆ ಏನಾದರೂ ಅಪಾಯ ಉಂಟಾದರೆ ಅದಕ್ಕೆ ಈ ಘಟನೆಯೇ ಕಾರಣವಾಗಿರುತ್ತದೆ’ ಎಂದು ಮಾಧ್ಯಮದ ಜೊತೆ ತಿಳಿಸಿದ್ದಾರೆ ಎನ್ನಲಾಗಿದೆ.