ನ್ಯೂಸ್ ನಾಟೌಟ್: ಕಾಲೇಜು ಗೆಳೆಯರೊಂದಿಗೆ ಇನ್ಸ್ಟಾಗ್ರಾಮ್ ರೀಲ್ ಮಾಡುತ್ತಿದ್ದ ವೇಳೆ 20 ವರ್ಷದ ಯುವಕ ಆಕಸ್ಮಿಕವಾಗಿ ಕಟ್ಟಡದ ಚಾವಣಿ ಮೇಲಿಂದ ಬಿದ್ದು ಮೃತಪಟ್ಟಿರುವ ಘಟನೆ ಶುಕ್ರವಾರ ಮಾರ್ಚ್ ೧೬ಕ್ಕೆ ಘತ್ತೀಸ್ಗಢದ ಬಿಲಾಸ್ಪುರದಲ್ಲಿ ನಡೆದಿದೆ. ಈ ಘಟನೆಯನ್ನು ಆತನ ಇಬ್ಬರು ಗೆಳೆಯರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಮೃತ ಯುವಕನನ್ನು ಆಶುತೋಷ್ ಸಾಹು ಎಂದು ಗುರುತಿಸಲಾಗಿದೆ.
ಈ ಘಟನೆಯು ಬಿಲಾಸ್ಪುರ ಜಿಲ್ಲೆಯ ಕಾಲೇಜಿನಲ್ಲಿ ಮಧ್ಯಾಹ್ನ ಸುಮಾರು 3 ಗಂಟೆ ಸಮಯದಲ್ಲಿ ನಡೆದಿದ್ದು, ಯುವಕನ ತಂದೆಯು ಈ ಸಂಬಂಧ ಯಾವುದೇ ದೂರು ನೀಡಲು ನಿರಾಕರಿಸಿದ್ದಾರೆ.
ಬಿಸಿಎ ವ್ಯಾಸಂಗ ಮಾಡುತ್ತಿದ್ದ ಸಾಹು ಮತ್ತು ನಾಲ್ಕು ಮಂದಿ ಗೆಳೆಯರು ಕಾಲೇಜು ಕಟ್ಟಡದ ಮೇಲೆ ಹೋಗಿದ್ದಾರೆ. ಅಲ್ಲಿಂದ ಆತ ಕಿಟಕಿಯ ಚಾವಣಿಯ ಮೇಲೆ ಇಳಿದಿದ್ದಾನೆ. ವಿಡಿಯೊದಲ್ಲಿ ಆತ ಚಾವಣಿಯ ಮೇಲೆ ಜಿಗಿಯುತ್ತಿರುವುದು ದಾಖಲಾಗಿದೆ, ಆತನ ಗೆಳೆಯರ ಪೈಕಿ ಒಬ್ಬ, “ನಿನ್ನ ತೂಕಕ್ಕೆ ಚಾವಣಿ ಮುರಿಯುವುದಿಲ್ಲ” ಎಂದು ಸ್ಪಷ್ಟವಾಗಿ ಕೇಳುತ್ತಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಲಾಸ್ಪುರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಸಿಂಗ್, “ಘಟನೆಯ ಕುರಿತು ತನಿಖೆ ಪ್ರಗತಿಯಲ್ಲಿದ್ದು, ಎಲ್ಲ ಸಂದರ್ಭಗಳಲ್ಲೂ ಮುನ್ನೆಚ್ಚರಿಕೆ ಅಗತ್ಯ” ಎಂದು ಬರೆದುಕೊಂಡಿದ್ದಾರೆ.