ನ್ಯೂಸ್ ನಾಟೌಟ್: ನೋಯ್ಡಾ ಸೆಕ್ಟರ್ 75 ರ ಬಹು ಮಹಡಿ ಸೊಸೈಟಿಯಲ್ಲಿ ನಿವಾಸಿಗಳ ಕಾರುಗಳನ್ನು ತೊಳೆಯುವ ಮೂಲಕ ಜೀವನ ಸಾಗಿಸುತ್ತಿದ್ದ 25 ವರ್ಷದ ವ್ಯಕ್ತಿ ಕಳಪೆ ಕೆಲಸ ಮಾಡಿದ್ದಾನೆಂದು ಆರೋಪಿಸಿ ಕೆಲಸದಿಂದ ವಜಾ ಮಾಡಲಾಗಿತ್ತು. ಇದೇ ಕೋಪಕ್ಕೆ ಬುಧವಾರ ಮಾರ್ಚ್ 15ರ ಬೆಳಗ್ಗೆ ಇಲ್ಲಿನ ನಿವಾಸಿಗಳ 14 ಕಾರುಗಳ ಮೇಲೆ ಆಸಿಡ್ ಸುರಿದಿದ್ದಾನೆ ಎಂದು ವರದಿ ತಿಳಿಸಿದೆ.
ಗುರುವಾರ ನೋಯ್ಡಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕೆಲಸದಿಂದ ವಜಾ ಮಾಡಿದ ಕೋಪಕ್ಕೆ ನೋಯ್ಡಾ ಮೂಲದ ವ್ಯಕ್ತಿಯೊಬ್ಬ ಕಾನೂನು ಕೈಗೆತ್ತಿಕೊಂಡು ಪೊಲೀಸರ ಅಥಿತಿಯಾಗಿದ್ದಾನೆ. ಬುಧವಾರ ಬೆಳಗ್ಗೆ ನಡೆದ ಈ ಘಟನೆಯು ಮ್ಯಾಕ್ಸ್ಬ್ಲಿಸ್ ವೈಟ್ ಹೌಸ್ ಸೊಸೈಟಿಯ ಪಾರ್ಕಿಂಗ್ ಪ್ರದೇಶದಲ್ಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದು, ಆರೋಪಿ ಹರ್ದೋಯ್ ಜಿಲ್ಲೆಗೆ ಸೇರಿದ ರಾಮರಾಜ್ ನನ್ನು ಭದ್ರತಾ ಸಿಬ್ಬಂದಿಗಳು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.
ರಾಮರಾಜ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 427 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಠಾಣಾಧಿಕಾರಿ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ. ಅಲ್ಲಿನ ನಿವಾಸಿಗಳ ಪ್ರಕಾರ, ರಾಮರಾಜ್ 2016 ರಲ್ಲಿ ಸೊಸೈಟಿಯಲ್ಲಿ ಕಾರುಗಳನ್ನು ತೊಳೆಯಲು ಪ್ರಾರಂಭಿಸಿದರು. “ಸುಮಾರು ಒಂದು ವಾರದ ಹಿಂದೆ, ಕೆಲವು ನಿವಾಸಿಗಳು ಅವರ ಕೆಲಸದಿಂದ ಸಂತೋಷವಾಗದ ಕಾರಣ ಕೆಲಸದಿಂದ ತೆಗೆದುಹಾಕಲು ನಿರ್ಧರಿಸಿದರು.
ಸೊಸೈಟಿಯ ಇತರ ಮನೆಯಲ್ಲಿ ರಾಮರಾಜ್ ಕೆಲಸ ಮಾಡುತ್ತಿದ್ದ ಕಾರಣ, ಅವರ ಪ್ರವೇಶವನ್ನು ನಿರ್ಬಂಧಿಸಿರಲಿಲ್ಲ. ಬುಧವಾರ ಬೆಳಗ್ಗೆ 9.15ರ ಸುಮಾರಿಗೆ ನೆಲಮಾಳಿಗೆಯಲ್ಲಿ ನಿಲ್ಲಿಸಿದ್ದ ಸುಮಾರು 15 ಕಾರುಗಳ ಮೇಲೆ ಆ್ಯಸಿಡ್ ಸುರಿಯುತ್ತಿರುವುದನ್ನು ಸೆಕ್ಯೂರಿಟಿ ನೋಡಿದ್ದಾರೆ. ಈ ಕಾರುಗಳು ಅವರನ್ನು ಕೆಲಸದಿಂದ ವಜಾ ಮಾಡಿದವರ ಒಡೆತನದಲ್ಲಿದ್ದವು’ ಎಂದು ಸೊಸೈಟಿಯ ಅಪಾರ್ಟ್ಮೆಂಟ್ ಮಾಲೀಕರ ಸಂಘದ ಉಪಾಧ್ಯಕ್ಷ ಸಂಜಯ್ ಪಂಡಿತ್ ಹೇಳಿದರು. ಆತ ಪೊಲೀಸ್ ವಶದಲ್ಲಿದ್ದು, ತನಿಖೆ ನಡೆಯುತ್ತಿದೆ.