ನ್ಯೂಸ್ ನಾಟೌಟ್: ಸಿನಿಮಾ ಒಬ್ಬರ ಜೀವನಕ್ಕೆ ಸಕಾರಾತ್ಮಕವಾಗಿ ಅಥವಾ ನಕಾರಾತ್ಮಕವಾಗಿ ಪರಿಣಾಮ ಬೀಳಬಹುದು, ಡಾ. ರಾಜ್ ಕುಮಾರ್ ಅಭಿನಯಿಸಿದ್ದ ಬಂಗಾರದ ಮನುಷ್ಯ ಚಿತ್ರದಿಂದ ಪ್ರೇರಿತರಾಗಿ ಅನೇಕರು ರೈತರಾದ ಉದಾಹರಣೆಗಳಿವೆ, ಹೀಗೆಯೇ ಅನೇಕರು ತಮ್ಮ ಇಷ್ಟದ ಹೀರೋವನ್ನು ಅನುಕರಿಸುವುದುಂಟು, ಸಿನಿಮಾದಲ್ಲಿ ಆದಂತೆ ಇಲ್ಲೂ ನಡೆಯುತ್ತದೆ ಎಂಬ ಭ್ರಮೆಯ ಒಳಗೆ ಸಿಲುಕಿ ಒಳಿತಾಗುವುದಕ್ಕಿಂತ ಕೆಡುಕಾದ ಉದಾಹರಣೆಗಳೇ ಹೆಚ್ಚು.
ಕಾಲಿವುಡ್ ಸ್ಟಾರ್ ಅಜಿತ್ ಕುಮಾರ್ ಅವರ ʼತುನಿವುʼ ಯಶಸ್ವಿಯಾಗಿ ಪ್ರದರ್ಶನವನ್ನು ಕಾಣುತ್ತಿದೆ. ಬ್ಯಾಂಕ್ ದರೋಡೆಯ ಕಥೆಯನ್ನೊಳಗೊಂಡ ಸಿನಿಮಾದಲ್ಲಿ ಮಾಸ್, ಕ್ಲಾಸ್ ಎರಡೂ ಅಂಶವೂ ಇದೆ. ಈ ಸಿನಿಮಾದಲ್ಲಿ ಬ್ಯಾಂಕ್ ದರೋಡೆ ಮಾಡುವ ದೃಶ್ಯವನ್ನು ನೋಡಿ, ವ್ಯಕ್ತಿಯೊಬ್ಬ ಅದರಿಂದ ಪ್ರೇರಣೆಗೊಂಡು ಬ್ಯಾಂಕ್ ಲೂಟಿ ಮಾಡಲು ಬಂದು ಸಿಕ್ಕಿ ಬಿದ್ದಿರುವ ಘಟನೆ ತಿರುಪ್ಪೂರಿನ ಧಾರಾಪುರಂನಲ್ಲಿ ನಡೆದಿದೆ.
ಸುರೇಶ್ ಎಂಬ ಪಾಲಿಟೆಕ್ನಿಕ್ ವಿದ್ಯಾರ್ಥಿ ʼತುನಿವುʼ ಸಿನಿಮಾದಿಂದ ಪ್ರೇರಣೆಗೊಂಡ ವ್ಯಕ್ತಿ. ಆತ ಬುರ್ಖಾಧರಿಸಿ ಬ್ಯಾಂಕ್ ಗೆ ಬಂದಿದ್ದಾನೆ. ಕೆಲ ಸಮಯ ಅತ್ತಿತ್ತ ನೋಡಿ, ಕೈಯಲ್ಲಿ ಚಾಕು ಹಾಗೂ ಗನ್ ಹಿಡಿದುಕೊಂಡು ಅಲ್ಲಿದ್ದ ಗ್ರಾಹಕರು, ಸಿಬ್ಬಂದಿಗಳನ್ನು ಹೆದರಿಸಿದ್ದಾನೆ. ಹಣ ನೀಡಿ ಎಂದು ಸಿಬ್ಬಂದಿಗೆ ಬೆದರಿಸಲು ಮುಂದೆ ಹೋಗುವಾಗ ಕೈಯಿಂದ ಚಾಕು ಕೆಳಕ್ಕೆ ಬೀಳುತ್ತದೆ. ಅದನ್ನು ತೆಗೆದುಕೊಳ್ಳಲು ಬಾಗುವಾಗ, ಚೇರ್ ನಲ್ಲಿ ಕೂತಿದ್ದ ವೃದ್ಧರೊಬ್ಬರು ಇದನ್ನು ನೋಡಿ ಕೂಡಲೇ ತನ್ನ ಟವೆಲ್ ನಲ್ಲಿ ದರೋಡೆಕೋರನನ್ನು ಗಟ್ಟಿಯಾಗಿ ಹಿಡಿದು ಅದುಮಿಡುತ್ತಾರೆ.. ಇದಕ್ಕೆ ಎಲ್ಲರೂ ಸಾಥ್ ಕೊಟ್ಟು ದರೋಡೆ ಮಾಡಲು ಬಂದವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲು ಸಹಕಾರಿಯಾಗುತ್ತಾರೆ.
ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆರೋಪಿಯ ಬಳಿ ಇದ್ದದ್ದು ಆಟಿಕೆ ಗನ್ ಎಂದು ತಿಳಿದು ಬಂದಿದೆ. ಸದ್ಯ ಸಿಸಿಟಿವಿಯಲ್ಲಿ ಘಟನೆಯ ದೃಶ್ಯ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ.