ನ್ಯೂಸ್ ನಾಟೌಟ್: ಕರಾವಳಿ ಜನರ ಆರಾಧ್ಯ ದೈವ ಸ್ವಾಮಿ ಕೊರಗಜ್ಜನ ಪವಾಡಗಳಿಗೆ ಸರಿಸಾಟಿಯಿಲ್ಲ ಅನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಸ್ವಾಮಿ ಕೊರಗಜ್ಜನಿಗೆ ಹರಕೆ ಹೊತ್ತ ಕೇವಲ 24 ಗಂಟೆಯಲ್ಲಿ ಕಾಣೆಯಾಗಿದ್ದ 50,000 ರೂ. ಮೌಲ್ಯದ ಚಿನ್ನದ ಬ್ರೆಸ್ಲೈಟ್ ವಾಪಸ್ ವಾರಿಸುದಾರರ ಕೈ ಸೇರಿದೆ. ಈ ಮೂಲಕ ಕೊರಗಜ್ಜನ ಮಹಿಮೆ ಪವಾಡಗಳಿಗೆ ಎಣೆಯಿಲ್ಲ ಅನ್ನುವುದು ಸಾಕ್ಷಿ ಸಮೇತವಾಗಿ ಮತ್ತೊಂದು ಬಾರಿಗೆ ನಿರೂಪಿತವಾಗಿದೆ.
ಸುಳ್ಯ ತಾಲೂಕಿನ ಸಂಪಾಜೆಯ ಕಲ್ಲುಗುಂಡಿಯ ಬ್ರೈಟ್ ಕಂಪ್ಯೂಟರ್ ನ ಉದ್ಯೋಗಿಯಾಗಿರುವ ಪ್ರಪುಲ್ಲಾ (26 ವರ್ಷ) ಸೋಮವಾರ ಮಧ್ಯಾಹ್ನ ತಮ್ಮ ಕೈಯಲ್ಲಿದ್ದ ಚಿನ್ನದ ಬ್ರೆಸ್ಲೈಟ್ ಕಳೆದುಕೊಂಡಿದ್ದರು. ಕಷ್ಟ ಪಟ್ಟು ದುಡಿದ ಹಣದಲ್ಲಿ ಅಲ್ಪಸ್ವಲ್ಪ ಕೂಡಿಟ್ಟು ಅವರು ಬ್ರೆಸ್ಲೈಟ್ ಖರೀದಿಸಿದ್ದರು. ಪ್ರಪುಲ್ಲಾ ಅವರು ಕಲ್ಲುಗುಂಡಿ ಮೇಲಿನ ಪೇಟೆಯಲ್ಲಿ ನಡೆಯುತ್ತಿರುವ ಸೊಸೈಟಿ ಕ್ರೀಡಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸ್ಕೂಟಿಯಲ್ಲಿ ತೆರಳಿದ್ದಾಗ ದಾರಿ ಮಧ್ಯೆ ಕಳೆದು ಹೋಗಿತ್ತು. ಈ ವಿಚಾರ ಕುಟುಂಬದವರಿಗೆ, ಸ್ನೇಹಿತರಿಗೆ ತಿಳಿದು ಹುಡುಕಾಟ ನಡೆಸಲಾಗಿತ್ತು. ರಾತ್ರಿಯಾದರೂ ಸಿಕ್ಕಿರಲಿಲ್ಲ. ಅಂತಿಮವಾಗಿ ಅವರು ಸುಳ್ಯ ತಾಲೂಕಿನ ದೊಡ್ಡಡ್ಕ ಶ್ರೀ ಕ್ಷೇತ್ರ ಸ್ವಾಮಿ ಕೊರಗಜ್ಜನಿಗೆ ಹರಕೆ ಹೊತ್ತುಕೊಂಡಿದ್ದರು. ಇದಾಗಿ ಕೇವಲ 24 ಗಂಟೆಯಲ್ಲಿ ಅವರ ಚಿನ್ನದ ಬ್ರೆಸ್ಲೈಟ್ ಸಿಕ್ಕಿದೆ. ಕಲ್ಲುಗುಂಡಿಯ ಟೈಲರ್ ಪುರುಷೋತ್ತಮ ಅನ್ನುವವರಿಗೆ ಚಿನ್ನದ ಬ್ರೆಸ್ಲೈಟ್ ಬಿದ್ದು ಸಿಕ್ಕಿದ್ದು ಅದನ್ನು ಪ್ರಪುಲ್ಲಾ ಅವರಿಗೆ ವಾಪಸ್ ನೀಡಿದ್ದಾರೆ. ಪ್ರಮಾಣಿಕತೆ ಅನ್ನುವುದೇ ಮರೆಮಾಚುತ್ತಿರುವ ಇಂದಿನ ದಿನಗಳಲ್ಲಿ ಟೈಲರ್ ಪುರುಷೋತ್ತಮ ಅವರು ತಂದು ಪ್ರಪುಲ್ಲಾ ಅವರಿಗೆ ವಾಪಸ್ ನೀಡಿರುವ ಕಾರ್ಯಕ್ಕೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಚಿನ್ನದ ಬ್ರೆಸ್ಲೈಟ್ ಕಾಣೆಯಾಗಿದ್ದ ಬಗ್ಗೆ ನ್ಯೂಸ್ ನಾಟೌಟ್ ಸೋಮವಾರ ವರದಿ ಮಾಡಿತ್ತು. ಯಾರಿಗಾದರೂ ಬಿದ್ದು ಸಿಕ್ಕಿದ್ದರೆ ಅದನ್ನು ವಾರಿಸುದಾರರಿಗೆ ವಾಪಸ್ ನೀಡಬೇಕೆಂದು ನ್ಯೂಸ್ ನಾಟೌಟ್ ಮೂಲಕ ಪ್ರಪುಲ್ಲಾ ಮನವಿ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.