ಚಿತ್ರಕಲೆ ಅನ್ನೋದು ಅದ್ಭುತ ಕಲೆ. ಆದರೆ ಇದು ಎಲ್ಲರಿಗೂ ಒಲಿದು ಬರುವುದಿಲ್ಲ. ಕೆಲವರಿಗೆ ಇದು ರಕ್ತದಲ್ಲಿಯೇ ಕರಗತವಾಗಿರುತ್ತದೆ. ಇಲ್ಲೊಬ್ಬ ಹುಡುಗ ಎಲೆಗಳಲ್ಲಿಯೇ ವಿವಿಧ ಗಣ್ಯರ ಚಿತ್ರ ಬಿಡಿಸಿ ಸುದ್ದಿಯಾಗಿದ್ದಾನೆ.
ಬಾಲ್ಯದಿಂದಲೂ ಚಿತ್ರವನ್ನು ಎಲೆಯಲ್ಲಿ ಬಿಡಿಸುವ ಹವ್ಯಾಸ ಬೆಳೆಸಿಕೊಂಡ ಈ ಹುಡುಗ ಪುನೀತ್ ರಾಜ್ ಕುಮಾರ್, ಮಹಾತ್ಮ ಗಾಂಧೀಜಿ, ನರೇಂದ್ರ ಮೋದಿ ಸೇರಿದಂತೆ ಹಲವಾರು ದಿಗ್ಗಜರ ಚಿತ್ರಗಳನ್ನು ಬಿಡಿಸಿದ್ದಾನೆ. ಇತ್ತೀಚೆಗಷ್ಟೇ ನಡೆದ ಸುಳ್ಯ ತಾಲೂಕು ೨೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಕೆ.ಆರ್ ಗಂಗಾಧರ್ ಅವರ ಭಾವಚಿತ್ರವನ್ನು ಎಲೆಯಲ್ಲಿ ಬಿಡಿಸಿ ಎಲ್ಲರ ಗಮನ ಸೆಳೆದಿದ್ದ. ಇದೀಗ ಕೆ.ಟಿ. ವಿಶ್ವನಾಥ ಅವರ ಭಾವ ಚಿತ್ರವನ್ನು ಎಲೆಯಲ್ಲಿ ಬಿಡಿಸುವುದರ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾನೆ.
ಕೆ.ಟಿ.ವಿಶ್ವನಾಥ್ ಸ್ಪೂರ್ತಿ:
ಕೆ.ಟಿ. ವಿಶ್ವನಾಥ್ ಯುವಪೀಳಿಗೆಗೆ ಸ್ಪೂರ್ತಿಯ ವ್ಯಕ್ತಿಯಾಗಿದ್ದಾರೆ.ಮನೀಶ್ ಕಾಡುಪಂಜ ಇದರಿಂದ ಪ್ರೇರೆಪಣೆಗೊಂಡು ಅವರ ಚಿತ್ರವನ್ನು ಎಲೆಯಲ್ಲಿ ಬಿಡಿಸಿದ್ದಾನೆ. ಪ್ರಸ್ತುತ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕೆ.ಟಿ.ವಿಶ್ವನಾಥ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಅರೆಭಾಷೆ ಅಕಾಡೆಮಿ ಮಾಜಿ ಸದಸ್ಯರು ಕೂಡ. ಸುಳ್ಯ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ, ಎನ್.ಎಮ್.ಸಿ. ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ಕೆ.ಟಿ. ವಿಶ್ವನಾಥ ಅವರನ್ನು ಪ್ರಶಸ್ತಿ,ಸನ್ಮಾನಗಳು ಅರಸಿ ಬಂದಿವೆ. ಇತ್ತೀಚೆಗಷ್ಟೇ ‘ಕನ್ನಡ ಕಸ್ತೂರಿ ಸನ್ಮಾನ’ ದೊರಕಿತ್ತು. ಗೌರವ ಡಾಕ್ಟರೇಟ್ ಪ್ರಶಸ್ತಿಗೂ ಭಾಜನರಾಗಿರುವ ಕೆ.ಟಿ.ವಿಶ್ವನಾಥ ಅವರು ಮಾದರಿ ವ್ಯಕ್ತಿಯಾಗಿ ವಿಭಿನ್ನ ಸಾಲಿನಲ್ಲಿ ನಿಲ್ಲುತ್ತಾರೆ. ಈ ಹಿನ್ನಲೆಯಲ್ಲಿ ಮನೀಶ್ ಕಾಡುಪಂಜ ಕೆ.ಟಿ. ವಿಶ್ವನಾಥ ಅವರಿಂದ ಸ್ಪೂರ್ತಿಗೊಂಡು ಅವರ ಭಾವಚಿತ್ರವನ್ನು ಎಲೆಯಲ್ಲಿ ಬಿಡಿಸಿ ಗಮನ ಸೆಳೆದಿದ್ದಾನೆ.
ಮನೀಶ್ ದ.ಕ.ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ನಾಗೇಶ್ ಕಾಡುಪಂಜ ಅವರ ಪುತ್ರ. ಅರಂತೋಡಿನ ನೆಹರೂ ಸ್ಮಾರಕ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ.ಬಿಡುವು ಸಿಕ್ಕಾಗಲೆಲ್ಲಾ ಈ ರೀತಿಯ ಚಿತ್ರವನ್ನು ಎಲೆಯಲ್ಲಿ ಬಿಡಿಸುವ ಹವ್ಯಾಸ ಬೆಳೆಸಿಕೊಂಡಿದ್ದಾನೆ.