ನ್ಯೂಸ್ ನಾಟೌಟ್ : ಭಾರತ ಕೃಷಿ ಪ್ರಧಾನ ದೇಶ. ಇಲ್ಲಿನ ರೈತರಿಗೆ ಕೃಷಿಯೇ ಜೀವಾಳ. ಆದರೆ ಇತ್ತೀಚಿಗೆ ಯುವಕರು ತಮ್ಮ ತಂದೆ-ತಾಯಿಯಂತೆ ಕೃಷಿ ಮಾಡುವುದನ್ನು ಬಿಟ್ಟು ಉದ್ಯೋಗ ಅರಸಿಕೊಂಡು ನಗರವನ್ನು ಸೇರಿಕೊಳ್ಳುತ್ತಿದ್ದಾರೆ. ಈ ನಡುವೆ ಇಲ್ಲೊಂದು ವಿದೇಶಿ ದಂಪತಿ ಭಾರತದಲ್ಲಿ ಲುಂಗಿ, ಟವಲ್ ಕಟ್ಟಿಕೊಂಡು ಸಾವಯವ ಕೃಷಿ ಮಾಡಿ ಎಲ್ಲರಿಂದಲೂ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇವರಿಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಮ್ಮ ದೇಶದಲ್ಲಿದ್ದವರೇ ಕೃಷಿಯ ಬಗ್ಗೆ ಅಸಡ್ಡೆ ತೋರಿಸುತ್ತಿರುವಾಗ ರಷ್ಯಾದಿಂದ ಬಂದು ಇಲ್ಲಿ ನೆಲೆಸಿ ದುಡಿಯುತ್ತಿರುವ ರಷ್ಯನ್ ದಂಪತಿಯ ಸಾಹಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಕಣ್ಣೂರು ಪಟ್ಟಣದಿಂದ ಕೆಲವೇ ಕಿ.ಮೀ. ದೂರದಲ್ಲಿರುವ ಆದಿಕದಲಾಯಿ ಎಂಬ ಪುಟ್ಟ ಹಳ್ಳಿಯಲ್ಲಿ ರಷ್ಯಾದ ದಂಪತಿ ನೆಲೆಸಿದ್ದಾರೆ. 24 ವರ್ಷದ ಸೇಂಟ್ ಪೀಟರ್ಸ್ಬರ್ಗ್ನ ಬೊಗ್ಡಾನ್ ಡ್ವೊರೊವಿ ಮತ್ತು ಅಲೆಕ್ಸಾಂಡ್ರಾ ಚೆಬ್ಬೊಟರೆವಾ ಭಾರತದ ಸಾವಯವ ಕೃಷಿ ಮತ್ತು ರೈತರು ಉಳುಮೆಯಿಂದ ಸ್ಫೂರ್ತಿ ಪಡೆದಿದ್ದಾರೆ. ಹೀಗಾಗಿ ಅವರಿಬ್ಬರು ಭಾರತಕ್ಕೆ ಬಂದು ಇಲ್ಲಿ ನೆಲೆಸಿದ್ದಾರೆ. ರಷ್ಯಾದಲ್ಲಿರುವ ಮನೆಯನ್ನು ಮಾರಿ ಆ ಹಣದಿಂದ ಕೇರಳದ ಅನುಭವಿ ರೈತ ಹ್ಯಾರಿಸ್ ಅವರಿಂದ ೫ ಎಕರೆ ಜಾಗವನ್ನು ಮನೆ ಸಮೇತ ನೋಂದಾಯಿಸಿ ಪಡೆದುಕೊಂಡರು. ಹಾಗೂ ಇನ್ನು ಮುಂದೆ ಭಾರತದಲ್ಲೇ ಕೃಷಿ ಮಾಡಿ ಇಲ್ಲೇ ವಾಸವಾಗಿರುತ್ತೇನೆ ಎಂದು ಬೊಗ್ಡಾನ್ ಮತ್ತು ಅಲೆಕ್ಸಾಂಡ್ರಾ ದಂಪತಿಗಳು ತಿಳಿಸಿದ್ದಾರೆ.
ನನ್ನ ಪೋಷಕರು ಕೂಡಾ ರೈತರಾಗಿದ್ದರು. ಇವರು ಕೋವಿಡ್ ಸಮಯದಲ್ಲಿ ಟರ್ಕಿಯಲ್ಲಿ ಜೇನು ಕೃಷಿಯನ್ನು ಪ್ರಾರಂಭಿಸಿದರು. ನಂತರ ಭಾರತದ ಸಾವಯವ ಕೃಷಿಯ ಬಗ್ಗೆ ಹೆಚ್ಚು ತಿಳಿಯಲು ಯೂಟ್ಯೂಬ್ , ಕೃಷಿ ವೆಬ್ಸೈಟ್ ನಲ್ಲಿ ಕೃಷಿ ಮತ್ತು ಗೊಬ್ಬರಗಳ ಬಗ್ಗೆ ಅರಿವನ್ನು ತಿಳಿದುಕೊಂಡಿದೆ. ಭಾರತದ ಪ್ರಕೃತಿ ಮತ್ತು ರೈತರ ಬಗ್ಗೆ ರಷ್ಯನ್ ಭಾಷೆಯಲ್ಲಿ ದಿ ಸೀಡ್ ಎಂಬ ಪುಸ್ತಕವನ್ನು ಬರೆದರು ಎಂದು ತಿಳಿಸಿದರು. ಅಲ್ಲದೆ ಇದೀಗ ಜಾಗದಲ್ಲಿ ತರಕಾರಿ, ಬಾಳೆ ,ಅಡಿಕೆ ಗಿಡಗಳನ್ನು ನೆಟ್ಟಿದ್ದಾರೆ. ಈ ದಂಪತಿಗಳ ಕೃಷಿಯ ಪ್ರೇರಣೆಯು ಜನರನ್ನು ಕೃಷಿಯತ್ತ ಆಕರ್ಷಿಸುವಂತಾಗಿದೆ.