ನ್ಯೂಸ್ ನಾಟೌಟ್: ಈರುಳ್ಳಿ ಇತ್ತೀಚೆಗೆ ಟೊಮೆಟೋ ಬೆಲೆಯ ಜೊತೆ ಈರುಳ್ಳಿಯೂ ಬೆಲೆ ಏರಿಸಿಕೊಂಡು ಜನರ ಕಣ್ಣಲ್ಲಿ ನೀರು ತರಿಸಿತ್ತು. ಈಗ ಅಂತಹ ಒಂದು ವಿಭಿನ್ನ ಈರುಳ್ಳಿ ಬೆಳೆಯ ಕಥೆ ಇಲ್ಲಿದೆ. ಇಲ್ಲೊಬ್ಬರ ಹೊಲದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 9 ಕೆಜಿಯಷ್ಟು ಈರುಳ್ಳಿಯನ್ನು (9kg Onion) ಬೆಳೆದಿದ್ದಾರೆ.
ಮಾರುಕಟ್ಟೆಯಲ್ಲಿ ನಾವೆಲ್ಲಾ ಒಂದು ಈರುಳ್ಳಿ ಗ್ರಾಂ ಲೆಕ್ಕದಲ್ಲಿ ಇರುವುದನ್ನು ನೋಡಿರುತ್ತೇವೆ. ಆದ್ರೆ ಇಲ್ಲೊಬ್ಬರ ಹೊಲಕ್ಕೆ 9 ಕೆಜಿ ಈರುಳ್ಳಿ ಬಂದಿದೆ ನೋಡಿ. ಸದ್ಯ ಇದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.
ಒಂದು ಈರುಳ್ಳಿ ಕೂಡ 9 ಕೆಜಿ ಆಗಬಹುದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ವ್ಯಕ್ತಿಯೊಬ್ಬರ ಹೊಲಕ್ಕೆ 9 ಕೆಜಿ ಈರುಳ್ಳಿ ಬಂದಿದ್ದು, ಈ ಮೂಲಕ ವಿಶ್ವದಾಖಲೆ ಮಾಡಿದ್ದಾರೆ. ಯುಕೆಯ ಗುರ್ನಸಿಯ ಗರೆಥ್ ಗ್ರಿಫಿನ್ ಎಂಬ ರೈತ 8.97 ಕೆಜಿ ತೂಕದ ದೈತ್ಯ ಈರುಳ್ಳಿಯನ್ನು ಬೆಳೆದು ವಿಶ್ವದಾಖಲೆ ಮಾಡಿದ್ದಾರೆ. ಹಾರೊಗೇಟ್ ಫ್ಲವರ್ ಶೋ ಎಂಬ Instagram ಪೇಜ್ನಲ್ಲಿ ಹೀಗೆ ಬರೆದಿದ್ದಾರೆ: ‘ಕಣ್ಣು ನೀರೂರಿಸುವ, ದೈತ್ಯ ಈರುಳ್ಳಿ ಹೊಸ ದಾಖಲೆಯನ್ನು ಮಾಡಿದೆ!
ಗುರ್ನಸಿಯ ಗರೆಥ್ ಗ್ರಿಫಿನ್ ಬೆಳೆದ ಈರುಳ್ಳಿ ಇಂದು ಹಾರೊಗೇಟ್ ಶರತ್ಕಾಲ ಪುಷ್ಪ ಪ್ರದರ್ಶನದ ಮೊದಲ ದಿನ 8.97 ಕೆಜಿ ತೂಕವನ್ನು ಹೊಂದಿದ್ದು, ಹೊಸ ದಾಖಲೆಯಾಗಿದೆ. ಇದು ಎಂದೆಂದಿಗೂ ವಿಶ್ವದಾಖಲೆ!’ ಈ ಪೋಸ್ಟ್ ಗೆ ಇದುವರೆಗೆ ನೂರಾರು ಲೈಕ್ ಗಳು ಬಂದಿದ್ದು, ಪೋಸ್ಟ್ ಅಂತರ್ಜಾಲದಲ್ಲಿ ಭಾರೀ ವೈರಲ್ ಸಹ ಆಗುತ್ತಿದೆ.
ಈ ಈರುಳ್ಳಿ 8.9 ಕೆಜಿ ತೂಕ ಮತ್ತು 21 ಇಂಚು ಉದ್ದವಿದೆ. ಗ್ರಿಫಿನ್ ಎಂಬವರ 12 ವರ್ಷಗಳ ದಾಖಲೆ ಮುರಿಯುವ ಪ್ರಯತ್ನ ಈ ಬಾರಿ ಫಲ ನೀಡಿದೆ. ಹೆಚ್ಚುವರಿ ಬೆಳಕು ಮತ್ತು ಸ್ವಯಂಚಾಲಿತ ನೀರಾವರಿಯಂತಹ ವಿಶೇಷ ಕ್ರಮಗಳೊಂದಿಗೆ, ಅವರು ಅಂತಹ ದೊಡ್ಡ ಈರುಳ್ಳಿಯನ್ನು ಬೆಳೆದಿದ್ದಾರೆ ಎನ್ನಲಾಗಿದೆ. ಇದು ಗಿನ್ನೆಸ್ ವಿಶ್ವ ದಾಖಲೆಗಳಿಂದ ಇನ್ನೂ ಗುರುತಿಸಲ್ಪಟ್ಟಿಲ್ಲ. ಗ್ರಿಫಿನ್ ಅವರ ತಂದೆಯೂ ದೊಡ್ಡ ಗಾತ್ರದ ಈರುಳ್ಳಿ ಬೆಳೆಗಾರರಾಗಿದ್ದರು. ಈ ದೊಡ್ಡ ಗಾತ್ರದ ಈರುಳ್ಳಿ ಕೂಡ ಅಡುಗೆಗೆ ಸೂಕ್ತವಾಗಿದೆ, ಆದರೆ ರುಚಿ ಸ್ವಲ್ಪ ಕಡಿಮೆಯಾಗಿದೆ ಎಂದು ಗ್ರಿಫಿನ್ ಮಾಹಿತಿ ನೀಡಿದ್ದಾರೆ.