ನ್ಯೂಸ್ ನಾಟೌಟ್: ರಾಷ್ಟ್ರ ರಾಜಧಾನಿ ದಿಲ್ಲಿಯನ್ನೇ ನಡುಗಿಸಿದ್ದ ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣ ಭಾರಿ ಚರ್ಚೆಗೆ ಕಾರಣವಾಗಿತ್ತು. ಅದಾದ ಬಳಿಕ ಇಂತಹ ಹತ್ತು ಹಲವು ಪ್ರಕರಣಗಳು ಬೆಳಕಿಗೆ ಬಂದವು. ಇದೀಗ ಅಂತಹುದೇ ಮತ್ತೊಂದು ಘಟನೆ ರಾಜ್ಯದ ಬಾಗಲಕೋಟೆ ಜಿಲ್ಲೆಯ ಮುಧೋಳ ಹೊರವಲಯದ ಮಂಟೂರ್ ಬೈಪಾಸ್ ಬಳಿ ನಡೆದಿದೆ. ಪಾಪಿ ಮಗನೋರ್ವ ತನ್ನ ಸ್ವಂತ ತಂದೆಯನ್ನೇ ಕೊಂದು ದೇಹವನ್ನು ತುಂಡು- ತುಂಡು ಮಾಡಿ ಕೊಳವೆ ಬಾವಿಗೆ ಬಿಸಾಕಿದ್ದಾನೆ.
ಪರಶುರಾಮ ಕುಳಲಿ (54) ದಿನನಿತ್ಯ ಕುಡಿದು ಮನೆಗೆ ಬಂದು ಕಿರಿ ಕಿರಿ ಮಾಡುತ್ತಿದ್ದ. ಮಗನನ್ನು ನೋಡಿದರೆ ಸಾಕು ಬೈಯುವುದು, ಹೊಡೆಯುವುದು ಇದೇ ಮಾಡುತ್ತಿದ್ದ. ಡಿ .6ರಂದು ಕುಡಿದ ಪರಶುರಾಮ ಕುಳಲಿ, ಕಬ್ಬಿಗೆ ಏಕೆ ನೀರು ಹಾಯಿಸಲು ಹೋಗಿಲ್ಲ ಎಂದು ಮಗ ವಿಠ್ಠಲ ಕುಳಲಿ (20)ಯನ್ನು ಕೇಳಿದ್ದಾನೆ. ಇಬ್ಬರ ನಡುವೆ ವಾಕ್ಸಮರ ನಡೆದಿದೆ. ಈ ವೇಳೆ ಸಿಟ್ಟಿಗೆದ್ದ ಮಗ ತಂದೆಯನ್ನು ರಾಡ್ನಿಂದಲೇ ಹಲ್ಲೆ ಮಾಡಿರುತ್ತಾನೆ. ಈ ವೇಳೆ ತಂದೆಯೇ ಮಗನಿಗೆ ಹೊಡೆಯಲು ಕೊಡಲಿ ಎತ್ತಿದ್ದ. ರೋಸಿ ಹೋದ ಮಗ ರಾಡ್ನಿಂದ ಹಲ್ಲೆ ನಡೆಸಿ ತಂದೆಯನ್ನು ಕೊಲೆಗೈದ. ಕೊಲೆ ಮಾಡಿದ ಬಳಿಕ ಈ ವಿಷಯ ಯಾರಿಗೂ ತಿಳಿಯದಂತೆ ಕೊಳವೆ ಬಾವಿಗೆ ಹಾಕಲು ಮುಧೋಳ ಹೊರವಲಯದ ಮಂಟೂರ್ ಬೈಪಾಸ್ ಬಳಿ ತಮ್ಮ ಹೊಲಕ್ಕೆ ಕೊಂಡೊಯ್ಯುದನು. ಕೊಳವೆ ಒಳಗೆ ನುಗ್ಗದ ಕಾರಣ ಮೃತದೇಹವನ್ನು 30 ತುಂಡಾಗಿ ಕತ್ತರಿಸಿ ಬೋರ್ವೆಲ್ಗೆ ಹಾಕಿ ಏನು ತಿಳಿಯದಂತೆ ಮನೆಗೆ ವಾಪಸ್ ಆಗುತ್ತಾನೆ.
ತನ್ನ ತಂದೆಯನ್ನೇ ಕೊಂದು ಕೊಳವೆ ಬಾವಿಗೆ ಹಾಕಿ ಅಮಾಯಕನಂತೆ ಮನೆಗೆ ಬಂದು ಸೇರಿದ್ದನು. ಘಟನೆಯಾದ ಮೂರು ದಿನದ ಬಳಿಕ ವಿಚಾರವನ್ನು ಮನೆಯವರಲ್ಲಿ ಹೇಳಿಕೊಳ್ಳುತ್ತಾನೆ. ಇದರಿಂದ ಬೆಚ್ಚಿಬಿದ್ದ ಕುಟುಂಬಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಮುಧೋಳ ಠಾಣೆ ಪೊಲೀಸರು ಸ್ಥಳಕ್ಕೆ ಜೆಸಿಬಿಯೊಂದಿಗೆ ಬಂದು ಕೊಳವೆಬಾವಿ ಅಗೆದು ಶವ ಹೊರ ತೆಗೆದಿದ್ದಾರೆ. ಸದ್ಯ ಆರೋಪಿ ವಿಠಲನನ್ನು ಪೊಲೀಸರು ಬಂಧಿಸಿದ್ದಾರೆ.