ನ್ಯೂಸ್ ನಾಟೌಟ್: ಹೈಕೋರ್ಟ್ಗಳ ನ್ಯಾಯಮೂರ್ತಿಗಳು, ಹಿರಿಯ ಪೊಲೀಸ್ ಅಧಿಕಾರಿಗಳ ಮೇಲೆ ದಾಳಿ ನಡೆಸಲು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯು ಸಂಚು ನಡೆಸಿತ್ತು ಎಂದು ಆರೋಪಿಸಲಾಗಿದೆ.
ಇಸ್ಲಾಮಿಕ್ ಸಂಘಟನೆ ಜೊತೆಗೆ ನಂಟು ಹೊಂದಿದ್ದ ಸಂಘಟನೆಯು 2047ರವರೆಗೆ ಜಾರಿಗೊಳಿಸಲು ಉದ್ದೇಶಿಸಿದ್ದ ಕಾರ್ಯಸೂಚಿ ಕುರಿತ ದಾಖಲೆಯೂ ದಾಳಿ ಸಂದರ್ಭದಲ್ಲಿ ದೊರೆತಿದೆ ಎಂದು ಕೇಂದ್ರ ಮತ್ತು ರಾಜ್ಯಗಳ ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ವ್ಯಾಪಕವಾಗಿ ಬಳಸಿಕೊಂಡು ಪಿಎಫ್ಐ, ಯುವಕರನ್ನು ಸಮಾಜವಿರೋಧಿ ಕೃತ್ಯಗಳಿಗೆ ನೇಮಿಸಿಕೊಳ್ಳುತ್ತಿತ್ತು. ಸಂಘಟನೆಯ ಉದ್ದೇಶಿತ ದಾಳಿ ಯೋಜನೆಗಳಲ್ಲಿ ತಮಿಳುನಾಡಿನ ಬೆಟ್ಟ ಪ್ರದೇಶ ವಟ್ಟಕ್ಕನಾಲ್ಗೆ ಭೇಟಿ ನೀಡುವ ವಿದೇಶಿಯರು ಮುಖ್ಯವಾಗಿ ಯಹೂದಿಗಳ ಮೇಲೆ ದಾಳಿ ನಡೆಸುವುದು ಸೇರಿತ್ತು ಎಂದು ವಿವರಿಸಿದ್ದಾರೆ.
ಈ ಮಧ್ಯೆ ವಿವಿಧ ರಾಜ್ಯಗಳಲ್ಲಿ ಪಿಎಫ್ಐನ ಕಚೇರಿಗಳಿಗೆ ಬೀಗಮುದ್ರೆ ಹಾಕಿದ್ದು, ಬ್ಯಾಂಕ್ ಖಾತೆಗಳನ್ನು ತಡೆಹಿಡಿಯಲಾಗಿದೆ. ಸಂಘಟನೆಗೆ ಸೇರಿದ ಟ್ವಿಟರ್ ಖಾತೆಯನ್ನು ತಡೆಹಿಡಿಯಲಾಗಿದೆ. ಉಗ್ರ ಸಂಘಟನೆ ಐಎಸ್ ಜೊತೆಗೆ ನಂಟು ಹೊಂದಿದೆ ಎಂಬ ಆರೋಪದಡಿ ಕೇಂದ್ರ ಸರ್ಕಾರ ಪಿಎಫ್ಐ ಅನ್ನು ಐದು ವರ್ಷಗಳಿಗೆ ನಿಷೇಧಿಸಿತ್ತು.