ನ್ಯೂಸ್ ನಾಟೌಟ್: ಮುಸ್ಲಿಂ ಸಮುದಾಯದಲ್ಲಿ ಮೋದಿಯನ್ನು ವಿರೋಧಿಸುವವರು ಎಷ್ಟು ಜನ ಇದ್ದಾರೋ ಅಷ್ಟೇ ಸಂಖ್ಯೆಯಲ್ಲಿ ಮೋದಿಯನ್ನು ಪ್ರೀತಿಸುವವರೂ ಕೂಡ ಇದ್ದಾರೆ ಅನ್ನೋ ಮಾತು ನಿಜವಾಗಿದೆ. ಪ್ರಧಾನಿ ಮೋದಿ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದು ಈ ಸಂದರ್ಭದಲ್ಲಿ ಮುಸ್ಲಿಂ ನಾಯಕಿಯೊಬ್ಬರು ಮೋದಿಯ ಹುಟ್ಟುಹಬ್ಬದಂದು ರಕ್ತ ತಿಲಕವಿಟ್ಟು ಆಚರಿಸಿಕೊಂಡಿದ್ದಾರೆ. ಈ ಸುದ್ದಿ ತಡವಾಗಿ ಬೆಳಕಿಗೆ ಬಂದಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇತ್ತೀಚೆಗೆ ಮುಸ್ಲಿಂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದ್ದ ಉತ್ತರ ಪ್ರದೇಶ ಬಿಜೆಪಿ ನಾಯಕಿ ರೂಬಿ ಆಸಿಫ್ ಖಾನ್ ಇದೀಗ ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿ ಮತ್ತೆ ಸಂಚಲನ ಸೃಷ್ಟಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ೭೨ನೇ ಹುಟ್ಟು ಹಬ್ಬವನ್ನು ರೂಬಿ ಆಸಿಫ್ ಖಾನ್ ತಮ್ಮ ಮನೆಯಲ್ಲಿ ಅದ್ಧೂರಿಯಾಗಿ ಆಚರಿಸಿದ್ದಾರೆ. ತಮ್ಮ ಬೆಂಬಲಿಗರ ಜೊತೆ ಮೋದಿ ಹೆಸರಿನ ದೊಡ್ಡ ಕೇಕ್ ಕತ್ತರಿಸಿ ಬರ್ತ್ ಡೇ ಆಚರಿಸಿದ್ದಾರೆ. ಅಷ್ಟೇ ಅಲ್ಲ ಇದೇ ವೇಳೆ ತಮ್ಮ ರಕ್ತ ತೆಗೆದು ತಿಲಕವಿಟ್ಟು ಜೈ ಮೋದಿ ಎಂದು ಘೋಷಣೆ ಕೂಗಿದ್ದಾರೆ. ರೂಬಿ ಆಸಿಫ್ ಖಾನ್ ನಡೆ ಮತ್ತೆ ಮುಸ್ಲಿಂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ರೂಬಿ ಆಸಿಫ್ ಖಾನ್ ಮತ್ತೆ ಮತ್ತೆ ಇಸ್ಲಾಂಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಇದನ್ನು ಮುಸ್ಲಿಂ ಸಮುದಾಯ ಸಹಿಸಿಕೊಳ್ಳುವುದಿಲ್ಲ ಎಂದು ಎಚ್ಚರಿಸಿದೆ.
ಮನೆಯಲ್ಲೇ ನಾನು ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬ ಆಚರಿಸಿದ್ದೇನೆ. ಮುಸ್ಲಿಂ ಸಹೋದರ ಸಹೋದರಿಯರು, ಬೆಂಬಲಿಗರ ಜೊತೆ ಕೇಕ್ ಕತ್ತರಿಸಿ ಸಿಹಿ ಹಂಚಿದ್ದೇನೆ. ರಕ್ತದಿಂದ ತಿಲಕ ಇಟ್ಟಿದ್ದೇನೆ. ಪ್ರಧಾನಿ ನರೇಂದ್ರ ಮೋದಿಗೆ ಉತ್ತಮ ಆರೋಗ್ಯ, ಆಯುಷ್ಯ ಭಗವಂತ ಕರುಣಿಸಲಿ ಎಂದು ಮುಸ್ಲಿಂ ಸಮುದಾಯ ಪ್ರಾರ್ಥಿಸಿದೆ ಎಂದು ರೂಬಿ ಆಸಿಫ್ ಖಾನ್ ಹೇಳಿದ್ದಾರೆ.